ಮಂಗಳೂರು: ಆಧುನಿಕ ಜೀವನದ ಒತ್ತಡ, ತಂತ್ರಜ್ಞಾನದ ಪ್ರಭಾವ, ವೃತ್ತಿಜೀವನದ ಸವಾಲುಗಳು, ಆರೋಗ್ಯ ಸೇವೆ ಹಾಗೂ ನಿಜವಾದ ಸಂತೋಷದ ಅನ್ವೇಷಣೆಗೆ ವೇದಾಂತದ ಮೂಲಕ ಹೊಸ ದೃಷ್ಟಿಕೋನ ನೀಡುವ ಉದ್ದೇಶದಿಂದ ರಾಮಕೃಷ್ಣ ಮಠ, ಮಂಗಳೂರು ವತಿಯಿಂದ ‘PRABODHA 26 – Awakening Minds, Enriching Lives’ ಎಂಬ ವಿಶೇಷ ಎರಡು ದಿನಗಳ ಉಪನ್ಯಾಸ ಮಾಲಿಕೆಯನ್ನು ನವೆಂಬರ್ 21 ಮತ್ತು 22ರಂದು ಆಯೋಜಿಸಲಾಗಿದೆ ಎಂದು ಮಠದ ಅಧ್ಯಕ್ಷರಾದ ಶ್ರೀಚಿತಾಕಾಮಾನಂದ ಮಹಾರಾಜ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೆರಿಕದ ನ್ಯೂಯಾರ್ಕ್ನ ವೇದಾಂತ ಸೊಸೈಟಿಯ ನಿವಾಸಿ ಧರ್ಮಗುರು ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾದ ಸ್ವಾಮಿ ಸರ್ವಪ್ರಿಯಾನಂದಜಿ ಮಹಾರಾಜ್ ಅವರು ಈ ಉಪನ್ಯಾಸಗಳನ್ನು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳು, ಸಂಶೋಧಕರು, ಉದ್ಯೋಗಿಗಳು, ವೈದ್ಯಕೀಯ ವೃತ್ತಿಪರರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಒಟ್ಟು ಐದು ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ನವೆಂಬರ್ 21ರಂದು ಎರಡು ಉಪನ್ಯಾಸಗಳು
ಮೊದಲ ಉಪನ್ಯಾಸವು ನವೆಂಬರ್ 21ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ‘The Power of Focus in an Age of Distraction’ ಎಂಬ ವಿಷಯದಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರೂಪಿಸಿರುವ ಈ ಅಧಿವೇಶನದಲ್ಲಿ ಡಿಜಿಟಲ್ ವ್ಯಾಕುಲತೆಗಳ ನಡುವೆ ಏಕಾಗ್ರತೆ, ಗಮನ ಕೇಂದ್ರೀಕರಣ, ಮಾನಸಿಕ ಸ್ಪಷ್ಟತೆ ಹಾಗೂ ಉದ್ದೇಶಪೂರ್ಣ ಜೀವನದ ಮಹತ್ವವನ್ನು ವಿವರಿಸಲಾಗುತ್ತದೆ.

ಅದೇ ದಿನ ಸಂಜೆ 5ರಿಂದ 7ರವರೆಗೆ ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK)ಯಲ್ಲಿ ಎರಡನೇ ಉಪನ್ಯಾಸ ನಡೆಯಲಿದೆ. ‘Can AI Be Conscious? – Intelligence, Awareness and the Vedantic Perspective’ ಎಂಬ ವಿಷಯದಡಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಬುದ್ಧಿಮತ್ತೆ ಮತ್ತು ಪ್ರಜ್ಞೆಯ ಸ್ವರೂಪವನ್ನು ವೇದಾಂತದ ದೃಷ್ಟಿಕೋನದಿಂದ ವಿಶ್ಲೇಷಿಸಲಾಗುತ್ತದೆ. ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು.
ನವೆಂಬರ್ 22ರಂದು ಮೂರು ಉಪನ್ಯಾಸಗಳು
ನವೆಂಬರ್ 22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮೂರನೇ ಉಪನ್ಯಾಸ ನಡೆಯಲಿದೆ. ‘Success Without Losing Your Peace – Karma Yoga for Work and Life’ ಎಂಬ ವಿಷಯದಡಿ ಐಟಿ ಕ್ಷೇತ್ರದವರು ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಉದ್ಯೋಗಿಗಳಿಗೆ ಯಶಸ್ಸು ಸಾಧಿಸುವುದರೊಂದಿಗೆ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳುವ ಕುರಿತು ಕರ್ಮಯೋಗದ ತತ್ವಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ.

ಅಂದು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಾಲ್ಕನೇ ಉಪನ್ಯಾಸ ನಡೆಯಲಿದ್ದು, ‘Who Heals the Healer? Burnout, Inner Strength and Meaning in Medicine’ ಎಂಬ ವಿಷಯವನ್ನು ಒಳಗೊಂಡಿದೆ. ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಅಧಿವೇಶನದಲ್ಲಿ ವೃತ್ತಿಜೀವನದ ಒತ್ತಡ, ಕರುಣೆ, ಆಂತರಿಕ ಶಕ್ತಿ ಹಾಗೂ ವೈದ್ಯಕೀಯ ಸೇವೆಯ ಉನ್ನತ ಉದ್ದೇಶಗಳ ಕುರಿತು ಚರ್ಚಿಸಲಾಗುತ್ತದೆ.
ಕೊನೆಯದಾಗಿ, ನವೆಂಬರ್ 22ರಂದು ಸಂಜೆ 6ರಿಂದ 8ರವರೆಗೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಐದನೇ ಉಪನ್ಯಾಸ ನಡೆಯಲಿದೆ. ‘The Search for Lasting Happiness – What Vedanta Can Teach Us’ ಎಂಬ ವಿಷಯದಡಿ ಶಾಶ್ವತ ಸಂತೋಷದ ಸ್ವರೂಪ, ಮನಸ್ಸಿನ ನೆಮ್ಮದಿ ಹಾಗೂ ಅರ್ಥಪೂರ್ಣ ಜೀವನವನ್ನು ಕಂಡುಕೊಳ್ಳುವಲ್ಲಿ ವೇದಾಂತದ ಮಾರ್ಗದರ್ಶನವನ್ನು ಪರಿಚಯಿಸಲಾಗುತ್ತದೆ.
ಆಧುನಿಕ ಜೀವನದ ವಿವಿಧ ಆಯಾಮಗಳನ್ನು ವೇದಾಂತದ ಶಾಶ್ವತ ಜ್ಞಾನದೊಂದಿಗೆ ಬೆಸೆಯುವ ಪ್ರಯತ್ನವೇ ‘PRABODHA 26’ ಉಪನ್ಯಾಸ ಮಾಲಿಕೆಯ ಪ್ರಮುಖ ಉದ್ದೇಶವಾಗಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸುವಂತೆ ರಾಮಕೃಷ್ಣ ಮಠ ಮತ್ತು ಮಿಷನ್, ಮಂಗಳೂರು ವತಿಯಿಂದ ಆಹ್ವಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಆಶ್ರಮದ ಅಧಿಕೃತ ವೆಬ್ಸೈಟ್ ಮೂಲಕ ಮುಂಚಿತವಾಗಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು
ಪತ್ರಿಕಾಗೋಷ್ಠಿಯಲ್ಲಿ ಡಾ.ಸತೀಶ್ ರಾವ್,ಡಾ.ಸುಮನ ಕಾಮತ್, ಸಿ.ಎ ಶಿವಕುಮಾರ್, ರಜನ್ ಮೊದಲಾದವರು ಉಪಸ್ಥಿತರಿದ್ದರು.

