ಮಂಜೇಶ್ವರದ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯದ ತ್ಯಾಜ್ಯ ವಿಲೇವಾರಿ: ಸಾಂಕ್ರಾಮಿಕ ರೋಗದ ಭೀತಿ, ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ಕರ್ನಾಟಕದಿಂದ ಟ್ಯಾಂಕರ್ ಲಾರಿಗಳಲ್ಲಿ ಶೌಚಾಲಯದ ತ್ಯಾಜ್ಯಗಳನ್ನು ತುಂಬಿಸಿಕೊಂಡು ಬಂದು, ಕೇರಳದ ಗಡಿ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಸುರಿಯುತ್ತಿರುವ ಪ್ರಕರಣಗಳು ದಿನೇ ದಿನೇ ವ್ಯಾಪಕವಾಗುತ್ತಿವೆ.

​ಕಳೆದ ರಾತ್ರಿ ಜನಸಂಚಾರ ಕಡಿಮೆಯಾದ ಸಮಯವನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು, ಮಂಜೇಶ್ವರ ಗ್ರಾಮ ಪಂಚಾಯತ್‌ನ 10ನೇ ವಾರ್ಡ್ ವ್ಯಾಪ್ತಿಯ ಬಡಾಜೆ ಚೌಕಿಯ ಸಾರ್ವಜನಿಕ ಸ್ಥಳದಲ್ಲಿ ಟ್ಯಾಂಕರ್ ಮೂಲಕ ತಂದ ಶೌಚಾಲಯದ ಕೊಳಚೆಯನ್ನು ಸುರಿದು ಪರಾರಿಯಾಗಿದ್ದಾರೆ.

ಇದರಿಂದಾಗಿ ಇಡೀ ಪರಿಸರದಲ್ಲಿ ತೀವ್ರವಾದ ದುರ್ಗಂಧ ಹರಡಿದ್ದು, ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದೆ.

​ತ್ಯಾಜ್ಯ ಸುರಿದಿರುವ ಈ ರಸ್ತೆಯ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ದಿನನಿತ್ಯ ನೂರಾರು ಸಾರ್ವಜನಿಕರು ನಡೆದಾಡುತ್ತಾರೆ. ಕೊಳಚೆ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆಯಿದ್ದು, ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಅಲ್ಲದೆ, ಸಮೀಪದ ಬಾವಿ ಹಾಗೂ ಜಲಮೂಲಗಳು ಕಲುಷಿತಗೊಳ್ಳುವ ಆತಂಕವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

​ಇಂತಹ ಅಕ್ರಮ ಕೃತ್ಯ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕೆಲವೇ ದಿನಗಳ ಹಿಂದೆ ಸಮೀಪದ ಫೊಸೋಟು ಸೇತುವೆ ಬಳಿಯೂ ಇದೇ ರೀತಿ ಟ್ಯಾಂಕರ್ ಲಾರಿಗಳಲ್ಲಿ ತಂದ ಶೌಚಾಲಯದ ತ್ಯಾಜ್ಯವನ್ನು ಸುರಿಯಲಾಗಿತ್ತು. ರಾತ್ರಿ ವೇಳೆ ಗಡಿ ಭಾಗದ ನಿರ್ಜನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಂಧೆ ನಿರಂತರವಾಗಿ ನಡೆಯುತ್ತಿದೆ.

ಗಡಿ ಪ್ರದೇಶಗಳು ಹಾಗೂ ನಿರ್ಜನ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದೇ ಇರುವುದು ಇಂತಹ ಸಮಾಜಘಾತುಕ ಶಕ್ತಿಗಳಿಗೆ ವರದಾನವಾಗಿ ಪರಿಣಮಿಸಿದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ದುಷ್ಕರ್ಮಿಗಳನ್ನು ಮಂಜೇಶ್ವರ ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ರಾತ್ರಿ ವೇಳೆ ಗಸ್ತು ಹೆಚ್ಚಿಸಿ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾಹಿತಿ ಅರಿತು ಸ್ಥಳಕ್ಕೆ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಬಶೀರ್ ಕನಿಲ ಬೇಟಿ ನೀಡಿ ಸಿ ಸಿ ಕ್ಯಾಮರಾ ಸ್ಥಾಪಿಸುವ ಭರವಸೆಯೊಂದಿಗೆ ಇಂತಹ ವಿಕೃತಿ ನಡೆಸುವವರನ್ನು ಕಾನೂನಿನ ಮುಂಬಾಗಕ್ಕೆ ತರಲು ಸರ್ವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!