ವಿಶೇಷ ಚೇತನರು ಮತ್ತು ಇತರ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದ ‘ಅಲೋಯ್ ಕ್ವಿಜ್-ವಿಜ್ 2026’

ಮಂಗಳೂರು: ವಿಶೇಷ ಚೇತನ ಮಕ್ಕಳ ಸಾಮರ್ಥ್ಯವನ್ನು ಗುರುತಿಸುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಕಾರ ಮತ್ತು ಪರಸ್ಪರ ಗೌರವದ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಅಲೋಯ್ ಕ್ವಿಜ್-ವಿಜ್ 2026’ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಭಾನುವಾರ ನಡೆಯಿತು.

ಸೈಂಟ್ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಂಗಸಂಸ್ಥೆಯಾದ ಸೈಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ಈ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿತ್ತು. ನಗರದ 16 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಈ ಸ್ಪರ್ಧೆಯ ವಿಶೇಷತೆಯೆಂದರೆ ಪ್ರತಿ ತಂಡದಲ್ಲಿ ಐವರು ವಿದ್ಯಾರ್ಥಿಗಳಿದ್ದು, ಅವರಲ್ಲಿ ಒಬ್ಬರು ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬರು ಮಾತು ಮತ್ತು ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಹಾಗೂ ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಈ ಮೂಲಕ ವಿಶೇಷ ಚೇತನ ಮಕ್ಕಳು ಇತರ ಮಕ್ಕಳಿಗೆ ಸಮಾನವಾಗಿ ಪ್ರತಿಭೆ ಪ್ರದರ್ಶಿಸಬಲ್ಲರು ಎಂಬುದನ್ನು ಸಾರುವುದರ ಜತೆಗೆ, ಮಕ್ಕಳಲ್ಲಿ ಪರಸ್ಪರ ಬೆರೆಯುವಿಕೆ, ಸಹಕಾರ ಮತ್ತು ಸಮಾನತೆಯ ಮನೋಭಾವ ಬೆಳೆಸುವ ಪ್ರಯತ್ನ ಮಾಡಲಾಯಿತು.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ತಮ್ಮ ಶಾಲಾ ದಿನಗಳನ್ನು ಸ್ಮರಿಸಿದರು. ಇಂತಹ ಅರ್ಥಪೂರ್ಣ ಮತ್ತು ಅಂತರ್ಗತ ಕಾರ್ಯಕ್ರಮ ಆಯೋಜಿಸಿದ ಸೈಂಟ್ ಅಲೋಶಿಯಸ್ ಹಳೆ ವಿದ್ಯಾರ್ಥಿಗಳ ಸಂಘವನ್ನು ಅಭಿನಂದಿಸಿದರು. ಸ್ಪರ್ಧೆಯಲ್ಲಿ ಗೆಲುವು ಮತ್ತು ಸೋಲು ಮುಖ್ಯವಲ್ಲ. ಇಲ್ಲಿ ಯಾರೂ ಸೋತವರಲ್ಲ. ಮಕ್ಕಳನ್ನು ಒಂದೇ ವೇದಿಕೆಗೆ ತರುವ ಮೂಲಕ ಇಂತಹ ಕಾರ್ಯಕ್ರಮ ರೂಪಿಸಿದ ಹಳೆ ವಿದ್ಯಾರ್ಥಿಗಳ ತಂಡವೇ ನಿಜವಾದ ವಿಜೇತರು ಎಂದರು.

ಸ್ಪರ್ಧೆಯಲ್ಲಿ ‘ಪ್ರಿವೇಲ್ ವಿತ್ ಬ್ರೈಲ್’, ‘ಬಝಿಂಗ್ ಬೀಸ್’, ‘ನಾಲೆಜ್ ಈಸ್ ಯೂನಿವರ್ಸಲ್’, ‘ಆ್ಯಕ್ಷನ್ಸ್ ಸ್ಪೀಕ್ ಲೌಡರ್’ ಮತ್ತು ‘ಹಾರ್ಮನಿ ಇನ್ ಥಾಟ್’ ಎಂಬ ಐದು ಸುತ್ತುಗಳಿದ್ದವು. ಮಂಗಳೂರು ಕ್ವಿಜ್ ಫೌಂಡೇಶನ್‌ನಿಂದ ಸ್ಪರ್ಧೆ ನಡೆಸಲಾಗಿದ್ದು, ಡಾ. ಅಣ್ಣಪ್ಪ ಕಾಮತ್ ರಸಪ್ರಶ್ನೆ ನಿರೂಪಕರಾಗಿ ಕಾರ್ಯನಿರ್ವಹಿಸಿದರು.

ಸೈಂಟ್ ತೆರೇಸಾ ಐಸಿಎಸ್‌ಇ ಶಾಲೆ, ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ಶಕ್ತಿನಗರ ಹಾಗೂ ಎಸ್‌ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಸೈಂಟ್ ಅಲೋಶಿಯಸ್ ಕಾಲೇಜು ಹೈಯರ್ ಪ್ರೈಮರಿ ಶಾಲೆ, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್‌ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ತಂಡಗಳು ದ್ವಿತೀಯ ಸ್ಥಾನ ಪಡೆದವು.

ಈ ವರ್ಷ ಮೊದಲ ಬಾರಿಗೆ ‘ಅತ್ಯುತ್ತಮ ತಂಡ ಸ್ಫೂರ್ತಿ’ ಪ್ರಶಸ್ತಿಯನ್ನು ಪರಿಚಯಿಸಲಾಗಿದ್ದು, ಸ್ಪರ್ಧೆಯುದ್ದಕ್ಕೂ ಉತ್ತಮ ಸಹಕಾರ ಮತ್ತು ತಂಡದ ಮನೋಭಾವ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.

ರೋಹನ್ ಕಾರ್ಪೊರೇಷನ್‌ನ ಡಿಯೋನ್ ಮಾಂಟೆರೊ ಅವರು ಸಂಘಟಕರನ್ನು ಅಭಿನಂದಿಸಿ, ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ರೋನಿ ಪಾಯ್ಸ್ ಅವರು ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಅವುಗಳನ್ನು ಗುರುತಿಸಿ ಬೆಳೆಯಲು ಸಮಾನ ಅವಕಾಶ ಕಲ್ಪಿಸುವುದು ಅಗತ್ಯ ಎಂದರು.

ಮೂಡಾ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸುವಂತೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮಕ್ಕೆ ಫಿಝಾ ಬೈ ನೆಕ್ಸಸ್, ಮಂಗಳೂರು ಕ್ವಿಜ್ ಫೌಂಡೇಶನ್ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ದಾನಿಗಳು ಸಹಕಾರ ನೀಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!