ಮಂಗಳೂರು, ಆಗಸ್ಟ್ 13: ಧರ್ಮಸ್ಥಳದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮಕುಡ್ಲ ಬೇಕೇ ಬೇಕು. ಶ್ರೀ ಕಾಂತರಾವ್ ರಂಥ ಅದ್ಭುತ ಟೀಮ್ ಇದೆ. ಮಾತೃಭಾಷೆ ನಮಗೆ ಬಹಳ ಪ್ರಿಯವಾದುದು. ಮಾತೃಭಾಷೆಯಲ್ಲಿ ತುಳುವಾರ್ತೆ, ಕಾರ್ಯಕ್ರಮ ಬಂದಾಗ ಭಾರೀ ಸಂತೋಷ ಎಂದು ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಮಂಗಳೂರಿನ ಪುರಭವನದಲ್ಲಿ ಆಗಸ್ಟ್ 12 ರಂದು ನಡೆದ ಪ್ರಥಮ ತುಳು ವಾರ್ತಾವಾಹಿನಿ ‘ನಮ್ಮಕುಡ್ಲ’ದ ಬೊಳ್ಳಿ ಪರ್ಬ 2025 ರ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ಕೇರ ಸಹೋದರರನ್ನು ಮುಂದೆ ಹೋಗಲು ಬಿಟ್ಟು ಅವರ ತಂದೆ ತಾಯಿ ದೊಡ್ಡ ಕೆಲಸ ಮಾಡಿದ್ದಾರೆ ಎಂದು ನಮ್ಮ ಕುಡ್ಲದ ನಿರ್ದೇಶಕರ ಬಗ್ಗೆ ಡಾ. ಹೆಗ್ಗಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ ಮಾಧ್ಯಮದ ಸಾಮ್ರಾಜ್ಯ ಕಟ್ಟಿದ ಹೆಮ್ಮೆಈ ಜಿಲ್ಲೆಗೆ ಇದೆ. ಮಾಧ್ಯಮ ಎಂಬುವುದು ಉದ್ಯಮವಾಗಿದೆ. ಆದರೆ ಈ ಉದ್ಯಮಕ್ಕೆ ಸಂಸ್ಕೃತಿ, ಕಲೆ, ಸಾಹಿತ್ಯದ ಸ್ಪರ್ಶವನ್ನು ಕರ್ಕೇರ ಸಹೋದರರು ಕೊಟ್ಟಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳ ದಾಖಲೆ ನಮ್ಮಕುಡ್ಲದಲ್ಲಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ಧರ್ಮ ಪ್ರಾoತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಂದೇಶ ನೀಡಿ ಅಪಪ್ರಚಾರ, ಹಿಂಸೆಗಳನ್ನು ಪ್ರಚಾರ ಮಾಡುವ ಹಲವು ಮಾಧ್ಯಮಗಳಿವೆ. ನಮ್ಮ ಕುಡ್ಲವು ಸಂಸ್ಕೃತಿ, ಸಾಮಾಜಿಕ ಕಾರ್ಯಕ್ರಮಗಳಿಂದ ಸಮಾಜದ ಕೆಡುಕುಗಳನ್ನು ಓಡಿಸಲು ಪ್ರಯತ್ನಿಸಿದೆ. ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವ ಮೂಲಕ ವಿವಿಧ ಧರ್ಮಗಳನ್ನು ಒಗ್ಗೂಡಿಸುವ ಸೇತುವೆಯನ್ನು ನಿರ್ಮಿಸಲು ಪ್ರಯತ್ನಿಸಿದೆ ಎಂದರು.ಸಂಸ್ಥೆಯಲ್ಲಿ ಕೆಲಸ ಮಾಡುವ ಸರ್ವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ಕ್ಯಾಮರಾ ಮೆನ್ ಶ್ರೀಕಾಂತ್ ರಾವ್ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಬೆಳ್ಳಿಹಬ್ಬದ ನೆನಪಿನ ಸಂಚಿಕೆ, ಕದ್ರಿ ನವನೀತ ಶೆಟ್ಟಿ ಪ್ರಧಾನ ಸಂಪಾದಕತ್ವದ ‘ಬೊಳ್ಳಿ ಮುಗುಳಿ’ಯನ್ನು ಡಾ. ಹೆಗ್ಗಡೆ ಅವರು ಬಿಡುಗಡೆ ಮಾಡಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನಮ್ಮಕುಡ್ಲ ಓಟಿಟಿ ಲೋಕಾರ್ಪಣೆ ಮಾಡಿದರು. ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ ಮತ್ತು ಸಂತೋಷ್ ಬಿ. ಕರ್ಕೇರ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ ವಿಜಯಕುಮಾರ್ ಕೊಡಿಯಾಲಬೈಲ್ ಅವರನ್ನು ಗೌರವಿಸಲಾಯಿತು.
ಕಟೀಲು ಕ್ಷೇತ್ರದ ಅಚರ್ಕ ಹರಿನಾರಾಯಣ ದಾಸ ಆಸ್ರಣ್ಣ, ಬಹುಭಾಷಾ ಸಿನಿಮಾ ನಟ ಡಾ. ಸುಮನ್ ತಲ್ವಾರ್, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸುಫ್ರಂಸೋ ಸಿನಿಮಾ ನಿರ್ಮಾಪಕ ಶಶಿಧರ ಶೆಟ್ಟಿ ಬರೋಡ, ಸೌದಿ ಅರೇಬಿಯಾದ ಉದ್ಯಮಿ ಅಬ್ದುಲ್ ರಹಿಮಾನ್ ಕರ್ನಿರೆ, ರಿಯಲ್ ಎಸ್ಟೇಟ್ ಉದ್ಯಮಿ ಡಾ. ನವೀನ್ ಕುಮಾರ್, ಕಂಬಳ ಕ್ಷೇತ್ರದ ಈ ಬಾರಿಯ ಚಾoಪಿಯನ್ ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್ ಆಂಡ್ ಡೈಮಂಡ್ಸ್ ಮಾಲಕ ಪ್ರಶಾಂತ್ ಶೇಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿದರು. ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.