ಮಂಗಳೂರು :ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 1 ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ನಡೆಯಲಿರುವುದು ಎಂದು ಮಿಥುನ್ ರೈ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುವ, ಅದನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿದ ಪಿಲಿನಲಿಕೆ ಸ್ಪರ್ಧೆ ಯಶಸ್ವಿಯಾಗಿ 9 ಆವೃತ್ತಿಗಳನ್ನು ಪೂರೈಸಿದೆ.
ಇದೀಗ ಪಿಲಿನಲಿಕೆ-10 ನೇ ಆವೃತ್ತಿಯಲ್ಲಿ ಸ್ಪರ್ಧಾಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ ತಂಡಗಳು ಭಾಗವಹಿಸಲಿದ್ದು ಬಹುಮಾನ ರೂಪದಲ್ಲಿ ಪ್ರಥಮ ರೂ.10,00,000/- ಮತ್ತು ಫಲಕ, ದ್ವಿತೀಯ ರೂ.5,00,000/- ಮತ್ತು ಫಲಕ, ತೃತೀಯ ರೂ.3,00,000/- ಮತ್ತು ಫಲಕ ಹಾಗೂ ವೈಯುಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ ರೂ. 50,000/- ನಗದು ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ರೂ.50,000/- ವನ್ನು ಪ್ರೋತ್ಸಾಹಕ ರೂಪದಲ್ಲಿ ನೀಡಲಾಗುವುದು.
ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರು ಪಾಲ್ಗೊಳ್ಳಲಿದ್ದು, ಸಹಕಾರ ರತ್ನ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರುಗಳು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ .
ದಶಮಾನೋತ್ಸವದ ಅಂಗವಾಗಿ ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಒಂದು ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಲು ನಿರ್ಧರಿಸಲಾಗಿದೆ. ಈ ಬಾರಿಯ ಪಿಲಿನಲಿಕೆ-10ಕ್ಕೆ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನ ಖ್ಯಾತ ತಾರೆಯರು ಮತ್ತು ಕ್ರಿಕೆಟ್ ಕ್ಷೇತ್ರದ ದಿಗ್ಗಜರು ತಾರಾ ಮೆರುಗನ್ನು ನೀಡಲಿದ್ದಾರೆ. ಈ ಬಾರಿ ಹೊಸ ತಂಡಗಳಿಗೆ ಅವಕಾಶವನ್ನು ನೀಡುತ್ತಿದ್ದು, ಆಸಕ್ತ ಹುಲಿವೇಷ ತಂಡಗಳು ತಮ್ಮ ಹೆಸರನ್ನು ಶೀಘ್ರದಲ್ಲೇ ನೋಂದಯಿಸಿಕೊಳ್ಳಬೇಕು ಎಂದು ತಿಳಿಸಿದರು .
ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡುತ್ತಿರುವ ಪಿಲಿನಲಿಕೆ ಪಂಥವನ್ನು ಈ ವರ್ಷದಿಂದ ಮಂಗಳೂರು ದಸರಾ ಮಹೋತ್ಸವದಲ್ಲೇ ಜೋಡಿಸಿಕೊಂಡು ಆಯೋಜಿಸಲು ಪ್ರತಿಷ್ಠಾನ ನಿರ್ಧರಿಸಿದೆ. ಕಾರ್ಯಕ್ರಮವ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಣೆ ಮಾಡುವ ಆಸನ ವ್ಯವಸ್ಥೆಯನ್ನು ಮಾಡಲಾಗುವುದು. ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಈ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ ಎಂದರು .
ಪಿಲಿನಲಿಕೆ ಸ್ಪರ್ಧೆಗೆ 10ತಂಡಗಳು: ಈ ಬಾರಿಯ ಪಿಲಿನಲಿಕೆ ಪಂಥಕ್ಕೆ ಜಿಲ್ಲೆಯ ಪ್ರತಿಷ್ಠಿತ 10 ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ತಂಡಗ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಪಿಲಿನಲಿಕೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸ್ಯಾಂಡಲ್‌ವುಡ್ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ .
ಪಿಲಿನಲಿಕೆ ಪಂಥದ ದಶಮ ಸಂಭ್ರಮದಲ್ಲಿ ಸರಕಾರಿ ಶಾಲೆ ದತ್ತು ಸ್ವೀಕರಿಸಲು ತೀರ್ಮಾನಿಸಿದ್ದಾರೆ ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ (ಹತ್ತು) ಸಂಭ್ರಮ ಹಿನ್ನಲೆಯಲ್ಲಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಶರಣ್ ಶೆಟ್ಟಿ, ನವೀನ್ ಶೆಟ್ಡಿ, ವಿಕಾಸ್, ಅವಿನಾಶ್,ನವೀನ್ ಶೆಟ್ಡಿ ಎಡ್ಮೇಮಾರ್ ರವರು ಉಪಸ್ಥಿತರಿದ್ದರು.