ಕಲ್ಲು ಕೋರೆಯ ಪರವಾನಿಗೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಕಲ್ಲಿನ ದರ ಇಳಿಕೆ ಕಾಣಲಿದೆ : ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯಗಳ ಮಾಲಕರ ಒಕ್ಕೂಟ ಸಂಘ

ಮಂಗಳೂರು: ರಾಜ್ಯ ಸರಕಾರ ಈಗಾಗಲೇ ರಾಜಧನ ಇಳಿಕೆ ಮಾಡಿದ್ದರಿಂದ ಕೆಂಪು ಕಲ್ಲಿನ ದರ ಇಳಿಕೆಯನ್ನು ಕಾಣುತ್ತಾ ಇದೆ . ಕೆಂಪು ಕಲ್ಲು ಗಣಿಗಾರಿಕೆಗೆ ಇನ್ನಷ್ಟು ಲೈಸೆನ್ಸ್ ಲಭ್ಯವಾದರೆ ಮುಂದಿನ ಎರಡು ತಿಂಗಳಲ್ಲಿ ಕಲ್ಲಿನ ದರವೂ ಕಡಿಮೆಯಾಗಲಿದೆ ಎಂದು ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯಗಳ ಮಾಲಕರ ಒಕ್ಕೂಟ ತಿಳಿಸಿದೆ.

ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ, ಹಿಂದೆ 242ರಷ್ಟು ಕೆಂಪುಕಲ್ಲು ಪಾಯಗಳಿಗೆ ಪರವಾನಿಗೆ ಇದ್ದು, ಇಷ್ಟೊಂದು ನಿಯಮಗಳೂ ಇರಲಿಲ್ಲ. ಕಳೆದ ಆರು ತಿಂಗಳಿನಿಂದೀಚೆಗೆ ಸರಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಪರವಾನಿಗೆ ಸೀಮಿತಗೊಂಡಿದೆ. ಈಗಾಗಲೇ 55 ಕಡೆ ಕಲ್ಲು ಗಣಿಗಾರಿಕೆಗೆ ಪರವಾನಿಗೆ ದೊರಕಿದ್ದು, ಸುಮಾರು 29ರಷ್ಟು ಪರವಾನಿಗೆ ಪ್ರಕ್ರಿಯೆ ಹಂತದಲ್ಲಿದೆ. ಈ ಪರವಾನಿಗೆಗಳೂ ದೊರೆತಾಗ ಈಗಾಗಲೇ ಇಳಿಕೆಯಾಗುತ್ತಾ ಸಾಗಿರುವ ಕೆಂಪುಕಲ್ಲಿನ ದರ ಇನ್ನಷ್ಟು ಇಳಿಕೆಯಾಗಲಿದೆ ಎಂದರು.

ಕೆಂಪುಕಲ್ಲಿಗೆ ಸಾಕಷ್ಟು ಬೇಡಿಕೆ ಹೊರತಾಗಿಯೂ ಪರವಾನಿಗೆ ಸೀಮಿತವಾಗಿರುವುದರಿಂದ ಸಾಗಾಟ ದರ ಹೆಚ್ಚಳವಾಗಿದೆ. ಕೋರೆಗಳಲ್ಲಿ ಈಗಾಗಲೇ ಎರಡು ವಿಧದ ಕಲ್ಲು ತಲಾ 35 ರೂ.ದರದೊಳಗೆ ನೀಡಲಾಗುತ್ತಿದೆ. ನಗರಕ್ಕೆ ಹತ್ತಿರದಲ್ಲಿ 12 ಪರವಾನಿಗೆಗಳು ಮಾತ್ರವೇ ಇದ್ದು, ಉಳಿದೆಲ್ಲವೂ ಸುಳ್ಯ ಪುತ್ತೂರು ಕಡೆ ಇರುವುದರಿಂದ ಸಾಗಾಟಕ್ಕೆ ಹೆಚ್ಚು ವೆಚ್ಚದಾಯಕವಾಗಿದೆ ಎಂದರು .

ಸಂಘದ ಸದಸ್ಯ ರವಿ ರೈ ಪಜೀರು ಹೆಚ್ಚಿನ ಮಾಹಿತಿಯನ್ನು ನೀಡಿ , ಪರವಾನಿಗೆ ಮಾಡಬೇಕಾದರೆ ನಕ್ಷೆ ಮಾಡಿ ಭೂ ದಾಖಲೆ ಅಧಿಕಾರಿಗಳಿಗೆ ಸಲ್ಲಿಸಿ ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆದು ಬಳಿಕ ಅನುಮತಿ ನೀಡಲಾಗುತ್ತದೆ. ನಿಗದಿಪಡಿಸಿದ ಸ್ಥಳದಲ್ಲಿ ಕಲ್ಲು ದೊರೆಯದಿದ್ದರೆ ಇನ್ನೊಂದು ಜಾಗದಲ್ಲಿ ಅವಕಾಶ ಕೋರಲು ಮತ್ತೆ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಕಲ್ಲು ತೆಗೆದ ಜಾಗದಲ್ಲಿ ಮಣ್ಣು ತುಂಬಿಸುವ ಕಾರ್ಯ ನಡೆಯಬೇಕು. ಕೃಷಿಗೆ ಅಗತ್ಯವಾದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ರೀತಿಯಾಗಿ ನಿಯಮಗಳು ಕಠಿಣಗೊಂಡಿರುವುದರಿಂದ ಪರವಾನಿಗೆ ಸಂಖ್ಯೆಯೂ ಕಡಿಮೆಯಾಗಿದೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ರಾಮ ಮುಗುರೋಡಿ , ಮೋಹನ್ ಶೆಟ್ಟಿ ಮುಂತಾದವರು ಉಪಸ್ಥಿತತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!