ಡಿಸೆಂಬರ್ 25 ರಿಂದ 28 ರ ವರೆಗೆ ಬದಿಯಡ್ಕದ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವಾರ್ಷಿಕೋತ್ಸವ

ಮಂಗಳೂರು:ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವಾರ್ಷಿಕೋತ್ಸವವು ಡಿಸೆಂಬರ್ 25 ರಿಂದ 28 ರ ವರೆಗೆ ವೈದಿಕ, ತಾಂತ್ರಿಕ, ಯೋಗ, ಸಂಗೀತ, ನೃತ್ಯ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ನಾರಾಯಣೀಯಂ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಲಹೆಗಾರರಾದ ಡಾ ವಸಂತ ಕುಮಾರ್ ಪೆರ್ಲ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಪ್ರತೀ ವರ್ಷ ‘ವೇದ ನಾದ ಯೋಗ ತರಂಗಿಣಿ’ ಎಂಬ ಹೆಸರಲ್ಲಿ ನಾಲ್ಕು ದಿನಗಳ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ . 4 ದಿನವೂ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನಡೆಯಲಿದೆ ಎಂದರು .ಮೊದಲ ದಿನ ಜೊತೆ ವೀಣಾವಾದಿನಿಯ ವಿದ್ಯಾರ್ಥಿ ಕಲಾವಿದರಿಂದ ತತ್ವ ಬಂಧೀ ನವಗ್ರಹ ಕೃತಿಗಳ ಹಾಡುಗಾರಿಕೆ ನಡೆಯಲಿದೆ .

ಎರಡನೇ ದಿನ ಎಡನೀರಿನ ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಬಳಿಕ ವಿವಿಧ ವಾದ್ಯವಾದನಗಳ ಸಾಂಗತ್ಯದಲ್ಲಿ , ‘ಸಮನ್ವಯ’ ಎಂಬ ವಿಶೇಷ ಕಾರ್ಯಕ್ರಮ, ಮಹಾಶ್ರೀಚಕ್ರ ನವಾವರಣ ಪೂಜೆ, ತತ್ತ್ವ ಬಂಧೀ ನವಾವರಣ ಕೃತಿಗಳ ಆಲಾಪನೆ, ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಅವರಿಂದ ನಾದಮಾಧುರಿ ಎಂಬ ಸಂಗೀತಸೇವೆ ಏರ್ಪಡಲಿದೆ ಈ ಕ್ಷಣ ಎಡನೀರು ಮಠಾಧೀಶರು ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ ಎಂದರು .

ಮೂರನೇ ದಿನ ಸಂಸ್ಥೆಯ ವಿದ್ಯಾರ್ಥಿ ಕಲಾವಿದರಿಂದ ರಸಿಕಪ್ರಿಯ ಎಂಬ ಹೆಸರಿನಲ್ಲಿ ಹಾಡುಗಾರಿಕೆ, ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪೈರುಪುಣಿ ಅವರಿಗೆ ಗುರುಪೂಜೆ, ದೆಹಲಿಯ ಸ್ವರಾಂಜಲಿ ಸಂಸ್ಥೆಯ ನಿವೇದಿತಾ ಭಟ್ಟಾಚಾರ್ಜೀ ಹಾಗೂ ತಂಡದಿಂದ ಹಿಂದೂಸ್ಥಾನೀ ಸಂಗೀತ ಕಚೇರಿ ಹಾಗೂ ಬೆಂಗಳೂರಿನ ವಿದುಷಿ ಅನುಷಾ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ

ಕೊನೆಯ ದಿನ ತ್ಯಾಗರಾಜರ ಪಂಚರತ್ನ ಕೃತಿಗಳ ಹಾಡುಗಾರಿಕೆ, ವಿದ್ಯಾರ್ಥಿಗಳಿಂದ ನಾದೋಪಾಸನಾ ಸಂಗೀತಾರ್ಚನೆ ಮತ್ತು ವಾಗ್ಗೇಯಕಾರ ಡಾ. ಎಂ. ಬಾಲಮುರಳಿಕೃಷ್ಣ ಅವರಿಗೆ ಗೌರವಪೂರ್ವಕವಾಗಿ ಮುರಳೀರವಂ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿವೆ.. ಬಳಿಕ ನಡೆಯುವ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಷದ ವೀಣಾವಾದಿನಿ ಪುರಸ್ಕಾರವನ್ನು ವಯಲಿನ್ ಕಲಾವಿದ ಎಡಪಳ್ಳಿ, ಅಜಿತ್ ಕುಮಾರ್ ಮತ್ತು ಹಿರಿಯ ಮೃದಂಗ ಕಲಾವಿದ ಬಾಲಕೃಷ್ಣ ಕಾಮತ್ ರಿಗೆ ನೀಡಲಾಗುವುದು . ನಂತರ ಮಧುರೈ ಟಿ. ಎನ್. ಎಸ್. ಕೃಷ್ಣ ಅವರಿಂದ ಸಂಗೀತ ಕಚೇರಿಯೊಂದಿಗೆ ಈ ವರ್ಷದ ಈ ಉತ್ಸವಕ್ಕೆ ತೆರೆ ಬೀಳಲಿದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಗೀತ ಶಿಕ್ಷಕರು ಮತ್ತು ಸಂಚಾಲಕರಾದ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು , ಸದಸ್ಯರಾದ ಹರಿಪ್ರಸಾದ್ ಉಪ್ಪಂಗಳ , ಡಾ| ಸೌಮ್ಯಶ್ರೀ ಮಂಗಳೂರು ಉಪಸ್ಥಿತರಿದ್ದರು .

SHARE
Loading spinner

One thought on “ಡಿಸೆಂಬರ್ 25 ರಿಂದ 28 ರ ವರೆಗೆ ಬದಿಯಡ್ಕದ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವಾರ್ಷಿಕೋತ್ಸವ

Leave a Reply

Your email address will not be published. Required fields are marked *

error: Content is protected !!