“ಅಲ್ಲಡ ಸ್ವರೂಪ” ರಾಜಧಾನಿಯಾದ ಮಡಿಯನ್ ಕುಲಂ

ಉತ್ತರ ಕೇರಳ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ನೆಲವಾಗಿದೆ. ತುಳುನಾಡು ಮತ್ತು ಮಲಬಾರ್ ಭಾಗಗಳಾಗಿ ವಿಭಜನೆಯಾಗಿದ್ದ ಈ ಪ್ರದೇಶವನ್ನು ಉತ್ತರದಲ್ಲಿ ತುಳು ಅರಸರುಗಳು ಹಾಗೂ ದಕ್ಷಿಣದಲ್ಲಿ “ನಡುವಾಳಿಗಳು” ಎಂದು ಕರೆಯಲ್ಪಟ್ಟ ಅಲ್ಲಡ ಸ್ವರೂಪ ರಾಜಮನೆತನಗಳು ಆಳುತ್ತಿದ್ದರು. ಚಂದ್ರಗಿರಿ ನದಿಯನ್ನು ಗಡಿಯಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದ ಅಲ್ಲಡ ಸ್ವರೂಪದ ರಾಜಧಾನಿಯೇ ಮಡಿಯನ್ ಕುಲಂ ಆಗಿತ್ತೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದೆ . ಅದಕ್ಕೆ ಪುಷ್ಟಿ ನೀಡುವಂತೆ ಇತಿಹಾಸಕಾರರ ದಾಖಲೆಗಳಲ್ಲಿ ಉಲ್ಲೇಖವಾಗಿದೆ . ದೇವಾಲಯದ ವಾಸ್ತು ಶೈಲಿ ರಚನೆಯನ್ನು ತೆಗೆದು ಕೊಂಡಾಗ ಇದು ಸುಮಾರು 500 ವರ್ಷಕ್ಕೂ ಅಧಿಕ ಐತಿಹ್ಯ ಹೊಂದಿರುವುದು ಸ್ಪಷ್ಟವಾಗಿದೆ . ಉತ್ತರ ಮಲಬಾರ್ ದಾಖಲೆಗಳು ಇದೇ ಮಾಹಿತಿಗೆ ಅಡಿಗಳನ್ನು ಹಾಕುತ್ತದೆ .
ದೇವಾಲಯದ ಕಲಶೋತ್ಸವದ ಸಂದರ್ಭದಲ್ಲಿ ಕ್ಷೇತ್ರಪಾಲಕ ದೈವ “ಅಲ್ಲಡ ಸ್ವರೂಪ” ಎಂಬ ನುಡಿಯನ್ನು ನೀಡುವುದು ಈ ನಂಬಿಕೆಗೆ ಮತ್ತಷ್ಟು ಬಲ ತುಂಬುತ್ತದೆ.

ಶ್ರೀ ಮಡಿಯನ್ ಕುಲಂ ದೇವಾಲಯ ಎಲ್ಲಿದೆ ….. ?

ಕಾಸರಗೋಡು ಜಿಲ್ಲೆಯ ಕಾಞಂಗಾಡಿನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಶ್ರೀ ಮಡಿಯನ್ ಕುಲಂ ದೇವಸ್ಥಾನ ಹಸಿರು ಪ್ರಕೃತಿಯ ಮಧ್ಯೆ ನೆಲೆಯಾಗಿದೆ . ಕದಳಿ ಕೆರೆಯ ಸೌಂದರ್ಯ ದೇವಾಲಯದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಕ್ಷೇತ್ರಪಾಲಕ, ನಡೆಯಲ್ ಭಗವತಿ ಹಾಗೂ ಕಾಳರಾತ್ರಿ ಅಮ್ಮನ ಆರಾಧನೆಗೆ ಪ್ರಸಿದ್ಧವಾಗಿರುವ ಈ ಕ್ಷೇತ್ರ ಉತ್ತರ ಕೇರಳದ ಪ್ರಮುಖ ಶೈವ-ಶಕ್ತಿ ಆರಾಧನಾ ಕೇಂದ್ರದ ಸಂಗಮದ ನೆಲೆಯಾಗಿದೆ .

ಮೇಲು ಕೀಳೆಂಬ ಭಾವಕ್ಕೆ ಇಲ್ಲಿ ಜಾಗವಿಲ್ಲ ….. !

ಕೇರಳದ ಸಾಮಾಜಿಕ ವ್ಯವಸ್ಥೆಯು ಮೇಲು ಕೀಳೆಂಬ ಜಾತಿ ವ್ಯವಸ್ಥೆಯಲ್ಲಿ ಸಮಾಜವು ನಡೆಯುತ್ತಿದ್ದವು ಎಂದು ಹಲವು ಘಟನೆಗಳು ಸಾಕ್ಷಿಯಾಗುತ್ತದೆ . ಸಾಮಾಜಿಕ ಸುಧಾರಕರು ಇದರ ನಿರ್ಮೂಲನೆಗೆ ಪಣತೊಟ್ಟರು . ಇಂಥಹಾ ಜಾತಿ ವ್ಯವಸ್ಥೆ ಉಚ್ಛ್ರಾಯ ಸ್ಥಿತಿ ಇದ್ದ ಕಾಲದಲ್ಲೂ ಸಮಾನತೆಯ ಸೆಲೆ ಇಲ್ಲಿತ್ತು ಎಂಬುದು ಮರೆಯುವಂತಿಲ್ಲ . ದೇವಾಲಯವು ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಗುರುತಿಸಿಕೊಂಡಿದೆ. ವಿಭಿನ್ನ ಜಾತಿ ಮತ್ತು ಧರ್ಮದ ಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸಿದ ಅಪರೂಪದ ತಾಣವಾಗಿದೆ . ಇಲ್ಲಿ ಮೇಲ್ ಜಾತಿ ಕೆಳಜಾತಿಯವರಿಗೆ ದೇವಾಲಯ ಪ್ರವೇಶ ಇದ್ದವು .

ದೇವಾಲಯ ಹೇಗೆ ಎಲ್ಲಾ ಜಾತಿ ಧರ್ಮದವರನ್ನು ಸೆಳೆಯುತ್ತದೆಯೋ ಹಾಗೆಯೇ ಇಲ್ಲಿನ ಪೂಜಾ ವಿಧಾನವು ವೈಶಿಷ್ಟತೆಯನ್ನು ಹೊಂದಿದೆ . ಸನ್ನಿಧಿಯಲ್ಲಿ ಮಧ್ಯಾಹ್ನದ ಪೂಜೆಯನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿದರೆ, ಮುಂಜಾನೆ ಹಾಗೂ ಸಂಜೆ ಪೂಜೆಗಳನ್ನು ಮಣಿಯಾಣಿ ಸಮುದಾಯದವರು ನಡೆಸುತ್ತಾರೆ. ಇಂತಹ ಧಾರ್ಮಿಕ ಸಾಮರಸ್ಯ ಉತ್ತರ ಮಲಬಾರ್ ಭಾಗದಲ್ಲಿ ಬೇರೆ ಯಾವುದೇ ಭಾಗದಲ್ಲಿ ಕಾಣಲು ಸಿಗದು .

ಮಡಿಯನ್ ಕುಲಂ ನ ಹಿನ್ನಲೆ

ದೇವಾಲಯದ ಐತಿಹ್ಯವೂ ವಿಶಿಷ್ಟವಾಗಿದೆ. ದಂತಕಥೆಗಳ ಪ್ರಕಾರ ಉದಿನೂರಿನಿಂದ ಸಂಚರಿಸುತ್ತಿದ್ದ ಕ್ಷೇತ್ರಪಾಲಕ ಈಶ್ವರನ್, ನಡೆಯಲ್ ಭಗವತಿಗೆ ತಯಾರಿಸಿದ್ದ ಅಪ್ಪಂನ ಪರಿಮಳಕ್ಕೆ ಆಕರ್ಷಿತರಾಗಿ ಮಡಿಯನ್‌ನಲ್ಲಿ ನೆಲೆಸಿದನೆಂದು ನಂಬಲಾಗಿದೆ. ಭಗವತಿಯ ಕ್ಷೇತ್ರದಲ್ಲಿ ಉಳಿದ ಕಾರಣ ಆತನಿಗೆ “ಮಡಿಯ” ಎಂಬ ಹೆಸರು ಬಂತು. ಮಲಯಾಳಂನಲ್ಲಿ “ಮಡಿಯ” ಎಂದರೆ ಸೋಮಾರಿ ಅಥವಾ ಉದಾಸೀನ ಎಂಬ ಅರ್ಥ. ಮುಂದೆ ಈ ಪ್ರದೇಶ “ಮಡಿಯನ್ ಕುಲಂ” ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

ವಾಸ್ತು ಶೈಲಿ

ಮಡಿಯನ್ ಕುಲಂ ದೇವಾಲಯ ತನ್ನ ಮರದ ಕೆತ್ತನೆಗಳಿಗೂ ಹೆಸರುವಾಸಿಯಾಗಿದೆ. ರಾಮಾಯಣ, ದಕ್ಷಯಾಗ, ಸಮುದ್ರಮಂಥನ, ನವಗ್ರಹಗಳು ಹಾಗೂ ಹನ್ನೆರಡು ರಾಶಿಗಳ ಕಲಾತ್ಮಕ ಕೆತ್ತನೆಗಳು ದೇವಾಲಯದ ವೈಭವಕ್ಕೆ ಕನ್ನಡಿ ಹಿಡಿದಿವೆ. ಪಶ್ಚಿಮ ಗೋಪುರದಲ್ಲಿ ಅಮೃತಮಥನ, ಕಾಳಿಯಮರ್ಧನ ಮತ್ತು ಅನಂತಶಯನದ ಚಿತ್ರಣಗಳು ವಿಶೇಷ ಆಕರ್ಷಣೆಯಾಗಿದೆ. ನರಸಿಂಹ ಅವತಾರದ ಭಿತ್ತಿಚಿತ್ರವೂ ಭಕ್ತರನ್ನು ಸೆಳೆಯುತ್ತದೆ.

ಪ್ರಮುಖ ಉತ್ಸವಗಳು … !

ದೇವಾಲಯದಲ್ಲಿ ನಡೆಯುವ “ಪಾಟು” ಮತ್ತು “ಕಲಶ” ಮಹೋತ್ಸವಗಳು ಅಪಾರ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಧನು ಮಾಸದಲ್ಲಿ ನಡೆಯುವ ನಾಲ್ಕು ದಿನಗಳ ಪಾಟುೋತ್ಸವದಲ್ಲಿ ಕಾಳರಾತ್ರಿ ಅಮ್ಮ, ಕ್ಷೇತ್ರಪಾಲಕ, ನಡೆಯಲ್ ಭಗವತಿ ಹಾಗೂ ಧಾರಿಗನ್ ದೇವರ ಚಿತ್ತಾರ ಬರೆದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೇ ತಿಂಗಳಲ್ಲಿ ನಡೆಯುವ ಎರಡು ದಿನಗಳ ಕಲಶೋತ್ಸವದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸುವ ಭಗವತಿ ಹಾಗೂ ಕ್ಷೇತ್ರಪಾಲಕ ದೈವಗಳ ವೈಭವ ಭಕ್ತರನ್ನು ಆಕರ್ಷಿಸುತ್ತದೆ.

ಆರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ದೇವಾಲಯ ಸಾಂಪ್ರದಾಯಿಕ ಕೇರಳ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಎರಡು ಪವಿತ್ರ ಕೊಳಗಳು, ನಾಗ ಮತ್ತು ಆನೆಯ ಶಿಲ್ಪಗಳು ಹಾಗೂ ವಿವಿಧ ಉಪದೇವತೆಗಳ ಸಾನಿಧ್ಯ ದೇವಾಲಯದ ಪೌರಾಣಿಕ ಮಹತ್ವವನ್ನು ಸಾರುತ್ತದೆ.

ಇಂದು ಶ್ರೀ ಮಡಿಯನ್ ಕುಲಂ ದೇವಸ್ಥಾನ ಕೇವಲ ಧಾರ್ಮಿಕ ಕ್ಷೇತ್ರವಾಗಿರದೆ, ಧಾರ್ಮಿಕ ಸಾಮರಸ್ಯ, ಸಾಂಸ್ಕೃತಿಕ ಐಕ್ಯತೆ ಮತ್ತು ಐತಿಹಾಸಿಕ ಪರಂಪರೆಯ ಜೀವಂತ ಸಂಕೇತವಾಗಿ ಪ್ರಸಿದ್ಧಿ ಪಡೆದಿದೆ.

✍️ಬರಹ : ಗಿರೀಶ್ ಪಿಎಂ ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!