ತಿರುವನಂತಪುರಂ : ಉತ್ತಮ ಭವಿಷ್ಯದ ಕನಸೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದ ಕೇರಳ ಮೂಲದ ಅಬ್ದುಲ್ ರಹೀಂ ಅವರ ಬದುಕು, ಒಂದು ದುರಂತ ಘಟನೆಯಿಂದ ಸಂಪೂರ್ಣ ಬದಲಾಗಿತ್ತು. ಆದರೆ, ಕೊನೆಗೂ ಸಾರ್ವಜನಿಕರ ಅಪಾರ ಬೆಂಬಲ ಮತ್ತು ಮಾನವೀಯತೆಯ ನೆರವಿನಿಂದ ಅವರು ಗಲ್ಲುಶಿಕ್ಷೆಯಿಂದ ಪಾರಾಗಿರುವ ಘಟನೆ ವಿಶ್ವದಾದ್ಯಂತ ಗಮನ ಸೆಳೆದಿದೆ.
ಕೇರಳದಲ್ಲಿ ಆಟೋ ಮತ್ತು ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹೀಂ, 2006ರಲ್ಲಿ ಉದ್ಯೋಗ ಅರಸಿ ಸೌದಿ ಅರೇಬಿಯಾದ ರಿಯಾದ್ಗೆ ತೆರಳಿದ್ದರು. ಅಲ್ಲಿ ಅವರಿಗೆ ತಮ್ಮ ಮಾಲೀಕರ 17 ವರ್ಷದ ಪುತ್ರ ಫಯಾಸ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಪಾರ್ಶ್ವವಾಯು ಪೀಡಿತನಾಗಿದ್ದ ಫಯಾಸ್ ಕುತ್ತಿಗೆಗೆ ಅಳವಡಿಸಿದ್ದ ಕೃತಕ ಉಸಿರಾಟ ಸಾಧನದ ಸಹಾಯದಿಂದ ಜೀವಿಸುತ್ತಿದ್ದನು.
ಒಂದು ದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟ್ರಾಫಿಕ್ ಸಿಗ್ನಲ್ ಬಳಿ ಉಂಟಾದ ಗೊಂದಲದ ಸಂದರ್ಭದಲ್ಲಿ, ಆಕಸ್ಮಿಕವಾಗಿ ರಹೀಂ ಅವರ ಕೈ ತಗುಲಿ ಬಾಲಕನ ಉಸಿರಾಟದ ಸಾಧನ ಕಳಚಿಬಿದ್ದಿತ್ತು. ಪರಿಣಾಮ ಕ್ಷಣಾರ್ಧದಲ್ಲೇ ಬಾಲಕ ಮೃತಪಟ್ಟಿದ್ದ. ಈ ಘಟನೆ ಬಳಿಕ ಅಬ್ದುಲ್ ರಹೀಂ ವಿರುದ್ಧ ಕೊಲೆ ಆರೋಪ ದಾಖಲಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ ಸೌದಿ ನ್ಯಾಯಾಲಯವು 2011ರಲ್ಲಿ ಅಬ್ದುಲ್ ರಹೀಂ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಬಳಿಕ ಹಲವು ವರ್ಷಗಳ ಕಾಲ ಅವರು ಜೈಲಿನಲ್ಲಿ ಸಾವಿನ ಭೀತಿಯಲ್ಲೇ ದಿನಗಳನ್ನು ಕಳೆದರು.
ಆದರೆ, 2024ರಲ್ಲಿ ಮಹತ್ವದ ತಿರುವು ದೊರೆಯಿತು. ಮೃತ ಬಾಲಕನ ಕುಟುಂಬಸ್ಥರು, ₹34 ಕೋಟಿ ‘ಬ್ಲಡ್ ಮನಿ’ ಪಾವತಿಸಿದರೆ ಕ್ಷಮಿಸಲು ಸಿದ್ಧ ಎಂದು ತಿಳಿಸಿದರು.
ಸಾಮಾನ್ಯ ಚಾಲಕನ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಅಸಾಧ್ಯವೆನಿಸಿತ್ತು. ಆದರೆ ಅಬ್ದುಲ್ ರಹೀಂ ಅವರ ಜೀವ ಉಳಿಸಲು ಕೇರಳದ ಜನರು, ಅನಿವಾಸಿ ಭಾರತೀಯರು ಹಾಗೂ ವಿಶ್ವದಾದ್ಯಂತದ ಸಹೃದಯರು ಒಂದಾಗಿ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದರು.
ಜಾಗತಿಕ ಮಟ್ಟದಲ್ಲಿ ನಡೆದ ಕ್ರೌಡ್ಫಂಡಿಂಗ್ ಅಭಿಯಾನಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಕೇವಲ ಕೆಲವೇ ದಿನಗಳಲ್ಲಿ ಸುಮಾರು ₹47 ಕೋಟಿ ರೂಪಾಯಿ ಸಂಗ್ರಹವಾಗಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ.
ಸಾರ್ವಜನಿಕರ ಈ ಅಪಾರ ಬೆಂಬಲದಿಂದ ಅಬ್ದುಲ್ ರಹೀಂ ಅವರ ಜೀವ ಉಳಿದಿದ್ದು, ಅವರ 19 ವರ್ಷಗಳ ಸಂಕಷ್ಟಭರಿತ ಹೋರಾಟಕ್ಕೆ ಕೊನೆಗೂ ನಿರಾಳ ಅಂತ್ಯ ಸಿಕ್ಕಂತಾಗಿದೆ.