ತಿರುವನಂತಪುರ: ನೈಋತ್ಯ ಮುಂಗಾರು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ವ್ಯಾಪಕ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಶನಿವಾರ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ. ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಇತರ ಆರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಭೂಕುಸಿತ, ಮಣ್ಣು ಕುಸಿತ ಹಾಗೂ ಹಠಾತ್ ಪ್ರವಾಹದ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುವವರು ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ನದಿ ದಂಡೆಗಳು ಹಾಗೂ ಅಣೆಕಟ್ಟುಗಳ ಕೆಳಭಾಗದ ಪ್ರದೇಶಗಳಲ್ಲಿ ವಾಸಿಸುವವರಿಗೂ ಎಚ್ಚರಿಕೆ ನೀಡಲಾಗಿದೆ.
ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವುದರಿಂದ ಹಾಗೂ ಹವಾಮಾನ ವೈಪರೀತ್ಯದ ಕಾರಣ ಜೂನ್ 8ರವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಬಲವಾದ ಗಾಳಿಯ ಸಾಧ್ಯತೆಯಿರುವುದರಿಂದ ದುರ್ಬಲ ಮನೆಗಳಲ್ಲಿ ವಾಸಿಸುವವರು ಮತ್ತು ಹಾನಿಗೊಳಗಾಗುವ ಸಾಧ್ಯತೆಯಿರುವ ಕಟ್ಟಡಗಳಲ್ಲಿ ಇರುವವರು ಮುನ್ನೆಚ್ಚರಿಕೆ ವಹಿಸಬೇಕು. ಮರಗಳು ಉರುಳುವುದು, ವಿದ್ಯುತ್ ಕಂಬಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ಸಂದರ್ಭಗಳಲ್ಲಿ ನದಿಗಳು, ಕೆರೆಗಳು ಹಾಗೂ ಇತರ ಜಲಮೂಲಗಳನ್ನು ದಾಟದಂತೆ, ಜಲಪಾತಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ಸೂಚಿಸಲಾಗಿದೆ. ಸೇತುವೆಗಳ ಮೇಲೆ ನಿಂತು ಸೆಲ್ಫಿ ತೆಗೆಯುವುದು ಅಥವಾ ಜನಸಂದಣಿ ಉಂಟುಮಾಡುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ.
ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು ಹಾಗೂ ಜಲಾವೃತ ಪ್ರದೇಶಗಳಲ್ಲಿ ವಾಹನ ಸಂಚಾರ ನಡೆಸದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.