ತಿರುವನಂತಪುರ: ಮಹಿಳೆಯರು ಹಾಗೂ ತೃತೀಯಲಿಂಗಿಗಳ ಸಬಲೀಕರಣದ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿರುವ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆಗೆ ಸೋಮವಾರ ಅಧಿಕೃತ ಚಾಲನೆ ನೀಡಲಾಗಿದೆ.
ತಂಬಾನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಹಿಳೆಯರು ಹಾಗೂ ತೃತೀಯಲಿಂಗಿಗಳ ಪ್ರತಿನಿಧಿಗಳಿಗೆ ಶೂನ್ಯ ಟಿಕೆಟ್‌ಗಳನ್ನು ಹಸ್ತಾಂತರಿಸುವ ಮೂಲಕ ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಪಪ್ಪನಂಕೋಡ್ ಡಿಪೋದಿಂದ ತಂಬಾನೂರು ಮೂಲಕ ಪೆರುಮಾತುರವರೆಗೆ ವಿಶೇಷ ಬಸ್ ಪ್ರಯಾಣ ನಡೆಸಲಾಯಿತು. ಮುಖ್ಯಮಂತ್ರಿ ಸೇರಿದಂತೆ 20ಕ್ಕೂ ಹೆಚ್ಚು ಗಣ್ಯರು ಈ ಪ್ರಯಾಣದಲ್ಲಿ ಭಾಗವಹಿಸಿದ್ದರು.
ವಿಶೇಷವೆಂದರೆ, ಉದ್ಘಾಟನಾ ಬಸ್‌ನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಕೆಎಸ್‌ಆರ್‌ಟಿಸಿಯ ಮೊದಲ ಮಹಿಳಾ ಚಾಲಕಿ ಶೀಲಾ ಬಸ್ ಚಾಲನೆ ಮಾಡಿದ್ದು, ಕಂಡಕ್ಟರ್ ಕೂಡ ಮಹಿಳೆಯಾಗಿದ್ದರು.
ಈ ಯೋಜನೆಯಡಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ರಾಜ್ಯದಾದ್ಯಂತ ಸುಮಾರು 3,125 ಸಾಮಾನ್ಯ ಬಸ್‌ಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದು, ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್-ಟು-ಟೌನ್, ಪಾಯಿಂಟ್-ಟು-ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ವಿವಿಧ ವಿಭಾಗಗಳ ಬಸ್‌ಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
ಆರಂಭಿಕ ಹಂತದಲ್ಲಿ 100 ದಿನಗಳ ಕಾಲ ಯೋಜನೆ ಜಾರಿಯಲ್ಲಿರಲಿದ್ದು, ಬಳಿಕ ಅದರ ಪರಿಣಾಮವನ್ನು ಪರಿಶೀಲಿಸಿ ಫಾಸ್ಟ್ ಹಾಗೂ ಸೂಪರ್ ಫಾಸ್ಟ್ ಬಸ್‌ಗಳಿಗೂ ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಯೋಜನೆಯಿಂದ ಉಂಟಾಗುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಖಾಸಗಿ ಬಸ್‌ಗಳ ಹಿತಾಸಕ್ತಿಗೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಯೋಜನೆಯಿಂದ ಮಹಿಳೆಯರ ಪ್ರಯಾಣ ವೆಚ್ಚದಲ್ಲಿ ಶೇ.15ರಿಂದ 25ರಷ್ಟು ಉಳಿತಾಯವಾಗುವ ನಿರೀಕ್ಷೆ ಇದ್ದು, ಅವರ ಆರ್ಥಿಕ ಸ್ವಾವಲಂಬನೆಗೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಗೆ ಸಹಕಾರಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.