ಮಂಜೇಶ್ವರ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ -ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ರೈಲ್ವೇ ನಿಲ್ದಾಣದ ಎದುರು ಭಾಗದ ರಾಷ್ಟ್ರೀಯ ಷಟ್ಪಥ ರಸ್ತೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪ್ರತಿದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿರುವುದು ಈ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ.

ಸ್ಥಳೀಯ ನಿವಾಸಿಗಳ ಹೇಳಿಕೆಯ ಪ್ರಕಾರ ಬಸ್ ನಿಲ್ದಾಣದ ಬಳಿ, ನಿರಂತರವಾಗಿ ಜನರ ಓಡಾಟ ಇರುವ ಸ್ಥಳದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು ಅಪಾಯವನ್ನು ಆಹ್ವಾನಿಸುವಂತಾಗಿದೆ. ಕೆಲವೊಮ್ಮೆ ವಿದ್ಯುತ್ ಪರಿಕರಗಳಲ್ಲಿ ಉಂಟಾಗುವ ದೋಷಗಳು ಅಥವಾ ಶಾರ್ಟ್ ಸರ್ಕ್ಯೂಟ್‌ನಂತಹ ತೊಂದರೆಗಳು ಭಾರಿ ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಅಪಾಯದಂಚಿನಲ್ಲಿರುವ ಈ ಟ್ರಾನ್ಸ್ ಫಾರ್ಮರ್ ಕೂಡಲೇ ಸ್ಥಳಾಂತರ ಮಾಡಬೇಕಾಗಿದೆ. ಬಸ್ ನಿಲ್ದಾಣಕ್ಕೇ ತಾಗಿ ಟ್ರಾನ್ಸ್‌ಫಾರ್ಮರ್ ಇಡುವುದು ಎಷ್ಟು ಸುರಕ್ಷಿತ? ಇಲ್ಲಿ ನಿತ್ಯ ಶಾಲಾ ಕಾಲೇಜು ಮಕ್ಕಳು ನಿಂತು ಬಸ್ ಕಾದಿರುತ್ತಾರೆ. ಈ ಸಂದರ್ಭ ಯಾವುದೇ ತಾಂತ್ರಿಕ ದೋಷದಿಂದ ಅನಾಹುತ ಸಂಭವಿಸಬಹುದಾದ ಸಾಧ್ಯತೆ ಇರುವುದರಿಂದ ಅದನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬುದು ಸ್ಥಳೀಯರ ಬೇಡಿಕೆ.

ಇಂತಹ ವಿಷಯಗಳಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಥರ ಹಾಗೂ ವಿದ್ಯುತ್ ಸೆಕ್ಷನ್ ಅಧಿಕಾರಿಗಳ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಾಗಿದೆ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ.
ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ ಟ್ರಾನ್ಸ್‌ಫಾರ್ಮರ್ ನ ಇಳಿಜಾರಿನ ಬಳಿ ಯಾವುದೇ ತಡೆಗೋಡೆ, ಎಚ್ಚರಿಕೆಗೆ ಸೂಚನೆ ಫಲಕಗಳು ಅಥವಾ ಸುತ್ತುವರೆ ಯಾತ ದುರಭದ್ರತೆ ಕಂಡುಬಂದಿತು. ಇಂತಹ ಸ್ಥಳಗಳಲ್ಲಿ ಕನಿಷ್ಠ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂಬ ಒತ್ತಾಯ ವ್ಯಾಪಕವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಉಪಕರಣಗಳ ಸ್ಥಾಪನೆ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ಮಂಜೇಶ್ವರದಲ್ಲಿ ಉದ್ಭವಿಸಿರುವ ಈ ರೀತಿಯ ಸಮಸ್ಯೆಗೆ ತಕ್ಷಣದ ಪರಿಹಾರ ಒದಗಿಸಲು ಸಂಬಂಧಿತ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂಬದು ಸಾರ್ವಜನಿಕರ ಒತ್ತಾಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!