ಮಂಗಳೂರು :ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 01 ಮತ್ತು 02 ರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯಲಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ವಲಯದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ಉದ್ಯೋಗ ಮಾಹಿತಿ ಶಿಬಿರವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ವೇದವ್ಯಾಸ ಕಾಮತ್ , ಆಳ್ವಾಸ್ ಪ್ರಗತಿ 2025 ಬೃಹತ್ ಉದ್ಯೋಗ ಮೇಳಕ್ಕೆ ಹೊರ ರಾಜ್ಯ , ಜಿಲ್ಲೆಗಳಿಂದಲ್ಲೂ ವಿದ್ಯಾರ್ಥಿಗಳು , ಉದ್ಯೋಗ ಆಕಾಂಕ್ಷಿ ಗಳು ಭಾಗವಹಿಸಲಿದ್ದಾರೆ . ನಮ್ಮ ಜಿಲ್ಲೆಯವರು ಇದರ ಗರಿಷ್ಠ ಉಪಯೋಗವನ್ನು ಪಡೆಯಬೇಕು . ಆಳ್ವಾಸ್ ಸಂಸ್ಥೆಯು ಉದ್ಯೋಗವನ್ನು ಹುಡುಕುವವರಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡಲಿದೆ . ಈ ಮಹತ್ವ ಕಾರ್ಯಕ್ಕಾಗಿ 60 ರಿಂದ 70 ಲಕ್ಷ ವ್ಯಯ ಮಾಡುತ್ತಿದೆ . ಇದು ದೊಡ್ಡ ಕಾರ್ಯವಾಗಿದೆ .
ಇಂದು ನಡೆಯುವ ಉದ್ಯೋಗ ಮಾಹಿತಿ ಶಿಬಿರವು ಉದ್ಯೋಗದ ಬಗ್ಗೆ ಜ್ಞಾನದ ಕೊರೆತೆ ನೀಗಿಸಿ , ಕೆಲಸವನ್ನು ಗಿಟ್ಟಿಸಿಕೊಳ್ಳುವಂತೆ ಮಾಡುತ್ತದೆ . ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆಯುವ ಈ ಬೃಹತ್ ಉದ್ಯೋಗ ಮೇಳಕ್ಕೆ ಮಂಗಳೂರು ಭಾಗದಿಂದ ಹೋಗುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಕರಾವಳಿ ಮೈದಾನದಿಂದ ಮಾಡುವುದಾಗಿ ತಿಳಿಸಿದರು .
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ವಿವೇಕ್ ಆಳ್ವ ಮಾತನಾಡಿ , ಉದ್ಯೋಗ ಮೇಳವನ್ನು ಆಳ್ವಾಸ್ ಸುತ್ತ ಮುತ್ತ , ಕರಾವಳಿ ಜಿಲ್ಲೆಗೆ ಮಾತ್ರ ಸೀಮಿತ ಮಾಡದೆ ಹೊರ ರಾಜ್ಯ , ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಿ ಗರಿಷ್ಠ ಲಾಭವನ್ನು ಪಡೆಯುವಂತೆ ಮಾಡಲಾಗುತ್ತಿದೆ . ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯಬೇಕು . ಪ್ರಚಾರ ಮಾಡುವ ಉದ್ದೇಶದಿಂದ ಈ ಮಹತ್ವ ಕಾರ್ಯವನ್ನು ನಾವು ಪ್ರತಿ ವರ್ಷ ಹಮ್ಮಿಕೊಳ್ಳದೆ , ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿ ಸಮಾಜಕ್ಕೆ ಕೊಡುಗೆಯಾಗಿ ಮಾಡುವ ಉದ್ದೇಶ ನಮ್ಮ ಸಂಸ್ಥೆಯದ್ದು .
ಉದ್ಯೋಗ ಮೇಳಕ್ಕೆ ಆಗಮಿಸುವ ವಿದ್ಯಾರ್ಥಿಗಳು ಕೆಲವು ಪೂರ್ವ ತಯಾರಿಯನ್ನು ಮಾಡಿಕೊಂಡು ಬರಬೇಕು . 10 ರೆಸ್ಯುಮ್ , ಜೆರಾಕ್ಸ್ ಮಾರ್ಕ್ ಕಾರ್ಡ್ , ಕಲರ್ ಪಾಸ್ ಪೋರ್ಟ್ ಸೈಜ್ ಫೋಟೋ , ಯಾವ ಉದ್ಯೋಗ ಆಯ್ಕೆ ಮಾಡಬೇಕ್ಕೆನ್ನುವ ನಿಖರತೆ ಇರಬೇಕು . ಈ ಉದ್ಯೋಗ ಮೇಳದಲ್ಲಿ 300 ಕ್ಕೂ ಅಧಿಕ ಕಂಪೆನಿಗಳು , 15 ,930 ಕ್ಕೂ ಅಧಿಕ ಉದ್ಯೋಗಿಗಳನ್ನು ಆಯ್ಕೆ ಮಾಡಲಿದೆ . ಉಚಿತ ಹಾಗು ಕಡ್ಡಾಯ ನೋಂದಾವಣಿಯನ್ನು ಉದ್ಯೋಗ ಆಕಾಂಕ್ಷಿಗಳು ಮಾಡತಕ್ಕದ್ದು .
ಕಾರ್ಯಕ್ರಮದಲ್ಲಿ ನಿವೃತ್ತ ಐಟಿಐ ಪ್ರಾಂಶುಪಾಲರಾದ ಬಾಲಕೃಷ್ಣ , ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಜಯಕರ್ ಭಂಡಾರಿ ಉಪಸ್ಥಿತರಿದ್ದರು .