ಕೋಟಯಂನಲ್ಲಿ 18 ವರ್ಷದ ಯುವಕನಿಂದ ಮದ್ಯದ ಅಮಲಿನಲ್ಲಿ ಅಪಾಯಕಾರಿ ಚಾಲನೆ: ಹಲವು ವಾಹನಗಳಿಗೆ ಡಿಕ್ಕಿ, ಸ್ಕೂಟರ್ ಸವಾರಿಗೆ ಗಂಭೀರ ಗಾಯ

ಕೋಟಯಂ: ಚಂಗನಾಶೇರಿಯಲ್ಲಿ 18 ವರ್ಷದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ತೆಂಗಣ ಪ್ರದೇಶದಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದ ಇನ್ನೋವಾ ಕಾರನ್ನು ಸ್ಥಳೀಯರು ಸಾಹಸಿಕವಾಗಿ ತಡೆದು ನಿಲ್ಲಿಸಿದ್ದಾರೆ.

ಕಾರನ್ನು ಚಲಾಯಿಸುತ್ತಿದ್ದ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ನಿವಾಸಿ ಗೋಕುಲ್ ಬಿನು (18) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದಲ್ಲಿ ಸ್ಕೂಟರ್ ಸವಾರ ಮಹಿಳೆಗೆ ಗಂಭೀರ ಗಾಯಗಳಾಗಿವೆ.ನೆಡುಂಬಾಶೇರಿಯ ವಾಹನ ಅಪಘಾತ ಮತ್ತು ಚೇರಾನೆಲ್ಲೂರಿನ ಘಟನೆಗಳ ಆಘಾತ ಮರೆಯಾಗುವ ಮುನ್ನವೇ ಮತ್ತೊಂದು ಅಪಾಯಕಾರಿ ಚಾಲನೆಯ ಘಟನೆ ವರದಿಯಾಗಿದೆ.

ಪಾಯಿಪ್ಪಾಡ್‌ನಿಂದ ತೆಂಗಣದವರೆಗೆ ಸುಮಾರು ಎಂಟು ಕಿಲೋಮೀಟರ್ ದೂರವನ್ನು ಯುವಕ ಅತಿವೇಗದಲ್ಲಿ ಇನ್ನೋವಾ ಕಾರು ಚಲಾಯಿಸಿದ್ದಾನೆ. ಈ ವೇಳೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ.ಡಿಕ್ಕಿಯ ತೀವ್ರತೆಗೆ ಕಾರಿನ ಚಕ್ರವೊಂದು ಕಳಚಿಕೊಂಡಿದೆ. ಆದರೂ ಕಾರನ್ನು ನಿಲ್ಲಿಸದೆ, ಮೂರು ಚಕ್ರಗಳಲ್ಲೇ ಇನ್ನೂ ಸ್ವಲ್ಪ ದೂರ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಸಾರ್ವಜನಿಕರ ಸಮಯಪ್ರಜ್ಞೆಯಿಂದ ಕಾರನ್ನು ತಡೆದು ನಿಲ್ಲಿಸಲು ಸಾಧ್ಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!