ಮಂಜೇಶ್ವರ: ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ತೆಪ್ಪೋತ್ಸವದ ಪೂರ್ವಭಾವಿಯಾಗಿ ಇಂದು (22/11/2026) ಮಂಜೇಶ್ವರ ಪಂಚಾಯತ್ ಸ್ವಯಂಸೇವಕರ ಸಮಿತಿಯ ಸಭೆಯು ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಸ್ವಯಂಸೇವಕ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಬಂಬ್ರಾಣ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪಂಚಾಯತ್ನ ಎಲ್ಲಾ ಸ್ವಯಂಸೇವಕರನ್ನು ಒಗ್ಗೂಡಿಸುವ ಕುರಿತು ವಿವರಿಸಿದರು. ಬ್ರಹ್ಮಕಲಶದ ದಿವಸದಂದು ದೇಶ-ವಿದೇಶಗಳಿಂದ 25,000ಕ್ಕೂ ಮೇಲ್ಪಟ್ಟ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ತೆಪ್ಪೋತ್ಸವದ ದಿವಸದಂದು ಈ ಸಂಖ್ಯೆಯು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ; ಹಾಗಾಗಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮಂಜೇಶ್ವರದ ಎಲ್ಲಾ ಸ್ವಯಂಸೇವಕರ ಸೇವೆ ಅತ್ಯಗತ್ಯವಾಗಿದೆ ಎಂದರು. ಮಂಜೇಶ್ವರ ಪಂಚಾಯತ್ ಸಮಿತಿಗಳ ಮೂಲಕ ಪಂಚಾಯತ್ನ ಪ್ರತಿಯೊಂದು ಹಿಂದೂ ಮನೆಗಳಿಗೆ ಆಮಂತ್ರಣ ಪತ್ರಿಕೆಯನ್ನು ತಲುಪಿಸುವುದರೊಂದಿಗೆ, ಆಯಾ ಭಾಗದ ದೇವಸ್ಥಾನಗಳು, ಭಜನಾ ಮಂದಿರಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕ್ಷೇತ್ರಕ್ಕೆ ಅಗತ್ಯವಿರುವ ಹಸಿರು ಹೊರೆಕಾಣಿಕೆ ಹಾಗೂ ಸ್ವಯಂಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ ಬ್ರಹ್ಮಕಲಶ ಸಮಿತಿಯ ಕಾರ್ಯದರ್ಶಿ ಹಾಗೂ ಹಣಕಾಸು ಸಮಿತಿಯ ಸಂಚಾಲಕರಾದ ಬಾಬು ಮಾಸ್ಟರ್ ಸಿದ್ದಿಬೈಲು ಅವರು ಕ್ಷೇತ್ರದ ಐತಿಹಾಸಿಕ ಹಾಗೂ ಧಾರ್ಮಿಕ ವಿಶೇಷತೆಗಳನ್ನು ವಿವರಿಸಿದರು. ಅನಂತಪುರ ಹಾಗೂ ತಿರುವನಂತಪುರ ಕ್ಷೇತ್ರಗಳ ನಡುವಿನ ಸಂಬಂಧ ಮತ್ತು ಕೇರಳವನ್ನು ಬೆಸೆಯುವ ಈ ಕ್ಷೇತ್ರದ ಮಹತ್ವವನ್ನು ಅವರು ತಿಳಿಸಿದರು. 2008ನೇ ಇಸವಿಯಲ್ಲಿ ನಿರ್ಮಿಸಲಾದ ಅನಂತಪುರದ ಮೂಲ ಬಿಂಬವಾದ ಅಪರೂಪದ ‘ಕಡುಶರ್ಕರ ವಿಗ್ರಹ’*ದ ನಿರ್ಮಾಣಕ್ಕಾಗಿ ಕಾಶ್ಮೀರದ ಗೋರೋಚನ, ಪ್ರಯಾಗದ ಗಂಗಾ ಜಲ ಸೇರಿದಂತೆ ದೇಶದಾದ್ಯಂತ ಸಂಗ್ರಹಿಸಿದ ಔಷಧೀಯ ದ್ರವ್ಯಗಳನ್ನು ಬಳಸಲಾಗಿದ್ದು, ಇದು ಇಡೀ ದೇಶವನ್ನು ಒಗ್ಗೂಡಿಸುವ ಪವಿತ್ರ ಕ್ಷೇತ್ರವಾಗಿದೆ ಎಂದು ಬಣ್ಣಿಸಿದರು. ಅಲ್ಲದೆ, ಕಳೆದ 30 ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರಸಿದ್ಧ *ತೆಪ್ಪೋತ್ಸವವು ಪುನರಾರಂಭಗೊಳ್ಳಲಿದ್ದು, ಈಗಾಗಲೇ ಅದರ ಪ್ರಾಯೋಗಿಕ ಪರೀಕ್ಷೆ (Trial Run) ಯಶಸ್ವಿಯಾಗಿ ನಡೆದಿದೆ ಎಂದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಇನ್ನು ಬ್ರಹ್ಮಕಲಶೋತ್ಸವಕ್ಕೆ ಅಂದಾಜು ಎರಡು ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಸಭೆಯ ಗಮನಕ್ಕೆ ತಂದರು.

ತದನಂತರ ಮಾತನಾಡಿದ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶ್ರೀ ಪೆರ್ಣಿ ಮುಚ್ಚಿಲೋಟ್ ಭಗವತಿ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ಕೃಷ್ಣಯ್ಯ ಅನಂತಪುರ ಅವರು, ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ವಿಶಿಷ್ಟತೆಯಿದೆ ಎನ್ನುತ್ತಾ, ಶ್ರೀ ಪೆರ್ಣಿ ಮುಚ್ಚಿಲೋಟ್ ಭಗವತಿ ಕ್ಷೇತ್ರ, ಅನಂತಪುರ ಕ್ಷೇತ್ರ ಹಾಗೂ ತಮ್ಮ ಮನೆತನದ ನಡುವಿನ ಐತಿಹಾಸಿಕ ಸಂಬಂಧವನ್ನು ಸ್ಮರಿಸಿದರು. ಅನಂತಪುರ ದೇವಸ್ಥಾನವು ಸುಮಾರು 9ನೇ ಅಥವಾ 10ನೇ ಶತಮಾನದಷ್ಟು ಪುರಾತನವಾದ ಕ್ಷೇತ್ರವಾಗಿರಬಹುದು ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ದೇವಸ್ಥಾನದ ವಿಶಿಷ್ಟತೆಗಳನ್ನು ವಿವರಿಸಿದರು. ಅಲ್ಲದೆ ಕ್ಷೇತ್ರದಲ್ಲಿ ನಡೆದಿರುವ ಯಾತ್ರಿ ನಿವಾಸ, ಪ್ರದಕ್ಷಿಣಾ ಪಥದ ಕೆಲಸಗಳು ಹಾಗೂ ಕ್ಷೇತ್ರದ ಭವ್ಯವಾದ ಪರಂಪರೆ ಮತ್ತು ಮಹಿಮೆಯ ಬಗ್ಗೆ ವಿಶೇಷವಾಗಿ ವಿವರಿಸುತ್ತಾ, “ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಪ್ರತಿಯೊಬ್ಬರೂ ಇದನ್ನು ತಮ್ಮದೇ ಮನೆಯ ಕಾರ್ಯವೆಂದು ಭಾವಿಸಿ ಶ್ರೀಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನದೊಂದಿಗೆ ಶ್ರೀ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ರಹ್ಮಕಲಶವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಮಂಜೇಶ್ವರ ಪಂಚಾಯತ್ ಬ್ರಹ್ಮಕಲಶ ಸಮಿತಿಯನ್ನು ರಚಿಸಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮಾತನಾಡುತ್ತಾ, ಗೌರವಾಧ್ಯಕ್ಷರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಮಂಜೇಶ್ವರದ ಮಣ್ಣಿನಲ್ಲಿರುವ ಶ್ರೀ ಕ್ಷೇತ್ರ ಅನಂತಪುರದ ಕಾರ್ಯಗಳಿಗೆ ತುಳುನಾಡಿನ ಎಲ್ಲಾ ಜನರು ಒಗ್ಗೂಡಿ ಕೈಜೋಡಿಸಬೇಕು ಎಂದರು. ಎಲ್ಲಾ ಕ್ಲಬ್ಗಳು, ಸಮಿತಿಗಳು ಹಾಗೂ ಸಂಘ-ಸಂಸ್ಥೆಗಳು ತಮಗೆ ಒದಗಿಬಂದಿರುವ ಶ್ರೀ ದೇವರ ಸೇವೆಯ ಈ ಪವಿತ್ರ ಅವಕಾಶವನ್ನು ಕಳೆದುಕೊಳ್ಳದೆ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಮಂಜೇಶ್ವರದ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವ. ನವೀನ್ ರಾಜ್ ಅವರು ಮಾತನಾಡಿ, ಪಂಚಾಯತ್ನ ಎಲ್ಲಾ ಮನೆಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸುವುದರೊಂದಿಗೆ, ಎಲ್ಲಾ ಸಂಘ-ಸಂಸ್ಥೆಗಳನ್ನು ಜೋಡಿಸಿಕೊಂಡು ಹೊರೆಕಾಣಿಕೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಕ್ಷೇತ್ರಕ್ಕೆ ಕರೆತರುವ ಮೂಲಕ ಬ್ರಹ್ಮಕಲಶದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನವಾಗಿ ಆಯ್ಕೆಯಾದ ಮಂಜೇಶ್ವರ ಪಂಚಾಯತ್ ಸಮಿತಿ:
- ಗೌರವಾಧ್ಯಕ್ಷರು: ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು
- ಅಧ್ಯಕ್ಷರು: ಅಡ್ವ. ನವೀನ್ ರಾಜ್
- ಸಂಚಾಲಕರು: ಹರೀಶ್ ಶೆಟ್ಟಿ ಮಾಡ
- ಉಪಾಧ್ಯಕ್ಷರು: ಕೃಷ್ಣ ಜಿ. ಮಂಜೇಶ್ವರ, ತುಳಸಿದಾಸ್ ಮಂಜೇಶ್ವರ, ಯಾದವ ಬಡಾಜೆ, ಸುರೇಶ್ ಗಾನಿಂಜಾಲ್
- ಕಾರ್ಯದರ್ಶಿ: ಭರತ್ ಕನಿಲ
- ಜೊತೆ ಕಾರ್ಯದರ್ಶಿಗಳು: ಯಶ್ ಪಾಲ್, ಸುಧಿನ್, ಜಗದೀಶ್, ಕೀರ್ತಿರಾಜ್, ಭಾಸ್ಕರ ಬಿ.ಎಂ., ಆದರ್ಶ ಬಿ.ಎಂ.
- ಸಮಿತಿ ಸದಸ್ಯರು: ರವಿಚಂದ್ರ ಮಂಜೇಶ್ವರ, ಲೋಹಿತ್ ಮಜಿಬೈಲ್, ಕಿಶೋರ್ ಕುಂಜತ್ತೂರು, ರವಿ ಚಾದಿಪಡ್ಪು, ದೇವರಾಜ್, ಸುನಿಲ್ ಮಾಧ್ಯಮ : ಜಗದೀಶ್ ಎಸ್ ಮಡಿವಾಳ (ನಮ್ಮ ಮೀಡಿಯಾ)
ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಉದಯಶಂಕರ ಪೆರ್ಣಿ, ಲೋಕಯ್ಯ ಸಿದ್ದಿಬೈಲು, ಜನಾರ್ದನ ಕಣ್ಣೂರು ಹಾಗೂ ಸ್ವಯಂಸೇವಕ ಸಮಿತಿಯ ಸಂಚಾಲಕರಾದ ಅವಿನಾಶ್ ಕಾರಂತ್ ಅವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ದಿನಕರ್ ಹೊಸಂಗಡಿ ಅವರು ಮಾತನಾಡಿ, 2008ರಲ್ಲಿ ನಡೆದ ಬ್ರಹ್ಮಕಲಶೋತ್ಸವವು ಆಗಿನ ಕಾಲಕ್ಕೆ ಮಹಾ ಚರಿತ್ರೆ ನಿರ್ಮಿಸಿದ ಐತಿಹಾಸಿಕ ಬ್ರಹ್ಮಕಲಶವಾಗಿತ್ತು ಎಂದು ತಿಳಿಸುತ್ತಾ, ಆ ಸಂದರ್ಭದಲ್ಲಿ ತಾವು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು. ಮತ್ತೊಮ್ಮೆ ಶ್ರೀ ದೇವರ ಸೇವೆ ಮಾಡುವ ಭಾಗ್ಯ ನಮಗೆಲ್ಲರಿಗೂ ದೊರೆತಿದ್ದು, ಈ ಭಾಗ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳೋಣ ಎಂದು ಹೇಳಿ ನೆರೆದಿದ್ದ ಸದಸ್ಯರಿಗೂ, ಆಗಮಿಸಿದ ಎಲ್ಲಾ ಗಣ್ಯರಿಗೂ ಹಾಗೂ ಸ್ವಯಂಸೇವಕರಿಗೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸಿದರು.

