ಮಂಜೇಶ್ವರ: ಮುಂದಿನ ವಿಧಾನಸಭಾ ಚುನಾವಣೆಗೆ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸಕ್ರಿಯರಾಗುತ್ತಿದ್ದಂತೆ, ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿಯ ಅವಕಾಶ ಕುಗ್ಗುತ್ತಿರುವ ಸೂಚನೆಗಳಿವೆ. ಈ ಕ್ಷೇತ್ರದಲ್ಲೇ ತನಗೆ ಅವಕಾಶ ನೀಡಬೇಕೆಂದು ಅಶ್ವಿನಿ ಪಕ್ಷದ ನಾಯಕರಿಗೆ ಈಗಾಗಲೇ ಮನವಿ ಸಲ್ಲಿಸಿದ್ದರು.
ಇದೇ ವೇಳೆ, ಸುರೇಂದ್ರನ್ ಅಭ್ಯರ್ಥಿತ್ವಕ್ಕೆ ಪಕ್ಷದ ಒಂದು ವರ್ಗ ವಿರೋಧ ವ್ಯಕ್ತಪಡಿಸಿದೆ. ಮೂರು ಬಾರಿ ಸೋಲು ಕಂಡ ಸುರೇಂದ್ರನ್ ಬದಲಿಗೆ ಈ ಬಾರಿ ಅಶ್ವಿನಿಗೆ ಅವಕಾಶ ನೀಡಬೇಕೆಂದು ಅವರ ಒತ್ತಾಯವಾಗಿದೆ. ಇದನ್ನು ಮನಗಂಡ ಸುರೇಂದ್ರನ್ ಕ್ಷೇತ್ರದಲ್ಲಿ ಪಕ್ಷದ ಬೆಂಬಲ ಬಲಪಡಿಸುವ ಪ್ರಯತ್ನ ಆರಂಭಿಸಿ, ಮಂಜೇಶ್ವರ ಮಂಡಲ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿ ಸುರೇಂದ್ರನ್ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2011ರಲ್ಲಿ 5,828 ಮತಗಳ ಅಂತರ, 2016ರಲ್ಲಿ 89 ಮತಗಳ ಅಂತರ ಹಾಗೂ 2021ರಲ್ಲಿ 745 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಮತಶೇಕಡಾ ಹಾಗೂ ಮತಗಳ ಸಂಖ್ಯೆಯಲ್ಲಿ ಪ್ರಗತಿ ಕಂಡರೂ ಗೆಲುವು ಕೈ ತಪ್ಪಿತ್ತು.