ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 17ನೇ ವಾರ್ಡ್‌ನ ಬಾವುಟಿ ಮೂಲೆ ಸುರುಮತ್ತೋಡ್ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 10 ಕುಟುಂಬಗಳ ಬದುಕು ಇಂದು ಆಡಳಿತದ ನಿರ್ಲಕ್ಷ್ಯದ ಸಂಕೇತವಾಗಿ ಮಾರ್ಪಟ್ಟಿದೆ. ಮೂಲಭೂತ ಸೌಲಭ್ಯವೆನಿಸುವ ನಡೆಯಲು ಸರಿಯಾದ ದಾರಿಯೇ ಇಲ್ಲದ ಸ್ಥಿತಿಯಲ್ಲಿ ಈ ಕುಟುಂಬಗಳು ದಿನನಿತ್ಯದ ಜೀವನವನ್ನು ಕಳೆಯುವಂತಾಗಿದೆ.
ಈ ಪ್ರದೇಶದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಜೀವ ಪಣಕ್ಕಿಡಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ಗರ್ಭಿಣಿಯರು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ತೆರಳುವುದು ಅಸಾಧ್ಯಕ್ಕೆ ಸಮಾನವಾಗಿದ್ದು, ವೃದ್ಧರು ಹಾಗೂ ಭಿನ್ನಚೇತನರು ಮನೆಯೊಳಗೆ ಬಂಧಿತರಾಗಿರುವಂತಾಗಿದೆ. ಸಾರ್ವಜನಿಕ ಆಡಳಿತವು ಜನರಿಗಾಗಿ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ ಇಲ್ಲಿನ ಸ್ಥಿತಿಯನ್ನು ನೋಡಿದರೆ ಸಹಜವಾಗಿ ಮೂಡುತ್ತದೆ.ಅತ್ಯವಶ್ಯ ಸೇವೆಗಳಾದ ಆಸ್ಪತ್ರೆ, ಶಾಲೆ, ರೇಷನ್ ಅಂಗಡಿ, ಸ್ಥಳೀಯಾಡಳಿತ ಕಚೇರಿ ಸೇರಿದಂತೆ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ಸುಮಾರು 250 ಮೀಟರ್ ಉದ್ದದ ರಸ್ತೆ ಕಳೆದ ಮಳೆಗಾಲದಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಮಳೆ ಕಳೆದೂ ತಿಂಗಳುಗಳೇ ಉರುಳಿದರೂ, ಆ ರಸ್ತೆಯತ್ತ ತಿರುಗಿ ನೋಡುವುದಕ್ಕೂ ಯಾರೂ ಮುಂದಾಗದಿರುವುದು ಇಲ್ಲಿನ ಜನತೆಯ ನೋವನ್ನು ಇನ್ನಷ್ಟು ಹೆಚ್ಚಿಸಿದೆ.
ರಸ್ತೆ ಕೊಚ್ಚಿ ಹೋದ ತಕ್ಷಣವೇ ಇಲ್ಲಿನ ಕುಟುಂಬಸ್ಥರು ಸರ್ವೇ ಇಂಜಿನಿಯರ್, ಮೈನರ್ ಇರಿಗೇಶನ್ ಇಲಾಖೆ ಅಧಿಕಾರಿಗಳು, ಹಾಗೂ ನೂತನವಾಗಿ ಅಧಿಕಾರಕ್ಕೆ ಬಂದ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷರು ಸೇರಿದಂತೆ ಎಲ್ಲ ಸಂಬಂಧಪಟ್ಟವರ ಗಮನಕ್ಕೆ ವಿಷಯವನ್ನು ತಂದಿದ್ದಾರೆ. ಸ್ಥಳ ಪರಿಶೀಲನೆಯ ಭರವಸೆ, ಆಶ್ವಾಸನೆಯ ಮಾತುಗಳು ಮಾತ್ರ ಸಿಕ್ಕಿವೆ. ಆದರೆ ನೆಲಮಟ್ಟದಲ್ಲಿ ಯಾವುದೇ ಕಾರ್ಯಾಚರಣೆ ನಡೆದಿಲ್ಲ ಎಂಬುದು ನಿವಾಸಿಗಳ ತೀವ್ರ ಆರೋಪವಾಗಿದೆ.ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ವಾಹನಗಳು ಈ ಪ್ರದೇಶಕ್ಕೆ ತಲುಪಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ದಾರಿ ಇನ್ನಷ್ಟು ಅಪಾಯಕಾರಿಯಾಗುತ್ತಿದ್ದು, ಕಾಲು ಜಾರಿ ಬೀಳುವ, ಗಾಯಗೊಳ್ಳುವ ಭೀತಿ ದಿನನಿತ್ಯದ ಸಂಗತಿಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು, ವೃದ್ಧರನ್ನು ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ಆಡಳಿತ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆಯೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಮ್ಮೆ ಅಧಿಕಾರಿಗಳು ನಮ್ಮ ಮನೆಯವರೆಗೆ ನಡೆದು ಬಂದು ನೋಡಲಿ. ಆಗ ನಮ್ಮ ನೋವು ಮಾತಿನಲ್ಲಲ್ಲ, ನೆಲದ ಮೇಲೆ ಕಾಣಿಸುತ್ತದೆ” ಎಂದು ಇಲ್ಲಿನ ನಿವಾಸಿಗಳು ಕಣ್ಣೀರಿನಿಂದ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿನಿಧಿಗಳು ಕಚೇರಿಗಳಲ್ಲಿ ಕುಳಿತು ಭರವಸೆ ನೀಡುವುದನ್ನು ಬಿಟ್ಟು, ನೆಲದ ವಾಸ್ತವವನ್ನು ಅರಿಯಬೇಕಾದ ಹೊಣೆಗಾರಿಕೆ ಅವರದ್ದೇ ಎಂಬ ಮಾತುಗಳು ಕೇಳಿಬರುತ್ತಿವೆ.ಆದ್ದರಿಂದ, ಸಂಬಂಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಕೇವಲ ತಾತ್ಕಾಲಿಕ ಅಲ್ಲ, ಶಾಶ್ವತ ಹಾಗೂ ಸುರಕ್ಷಿತ ನಡೆದು ಹೋಗುವ ದಾರಿ ಕಲ್ಪಿಸಬೇಕು. ಇಲ್ಲದಿದ್ದರೆ ಆಡಳಿತದ ನಿರ್ಲಕ್ಷ್ಯದಿಂದ ಉಂಟಾಗುವ ಯಾವುದೇ ಅನಾಹುತಕ್ಕೂ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಬಾವುಟಿ ಮೂಲೆ ಸುರುಮತ್ತೋಡ್ ನಿವಾಸಿಗಳು ಎಚ್ಚರಿಸಿದ್ದಾರೆ.