ಮಂಜೇಶ್ವರ: ಪವಿತ್ರ ರಂಜಾನ್ ಮಾಸದ 27ನೇ ರಾತ್ರಿಯಾದ ‘ಲೈಲತುಲ್ ಖದ್ರ್’ ಸಂದರ್ಭದಲ್ಲಿ ಮಂಜೇಶ್ವರದ ವಿವಿಧ ಮಸೀದಿಗಳಲ್ಲಿ ಭಕ್ತಿಭಾವದಿಂದ ಕೂಡಿದ ವಿಶೇಷ ಪ್ರಾರ್ಥನಾ ಸಭೆಗಳು ಮತ್ತು ಧಾರ್ಮಿಕ ಪ್ರಭಾಷಣಗಳು ನಡೆದವು. ಸಾವಿರ ತಿಂಗಳುಗಳಿಗಿಂತಲೂ ಶ್ರೇಷ್ಠವೆಂದು ಪರಿಗಣಿಸಲ್ಪಡುವ ಈ ರಾತ್ರಿಯ ಪುಣ್ಯವನ್ನು ಅರಸಿ ಸಾವಿರಾರು ವಿಶ್ವಾಸಿಗಳು ಮಸೀದಿಗಳಲ್ಲಿ ಜಮಾಯಿಸಿದ್ದರು.
ಕುಂಜತ್ತೂರು ತೂಮಿನಾಡು ಮಸ್ಜಿದ್ ನೂರ್‌ನಲ್ಲಿ ನಡೆದ ವಿಶೇಷ ಸಮಾರಂಭವು ಭಕ್ತರ ಗಮನ ಸೆಳೆಯಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹಿರಿಯ ವಿದ್ವಾಂಸರಾದ ಕೆ.ಟಿ. ಸಿರಾಜ್ ಅವರು ಆಗಮಿಸಿದ್ದರು.
ಕೆ.ಟಿ. ಸಿರಾಜ್ ಅವರು ಲೈಲತುಲ್ ಖದ್ರ್ ರಾತ್ರಿಯ ಮಹತ್ವ, ರಂಜಾನ್ ಮಾಸದ ಕೊನೆಯ ಹತ್ತು ದಿನಗಳ ಶ್ರೇಷ್ಠತೆ ಮತ್ತು ಮಾನವ ಜೀವನದಲ್ಲಿ ಧರ್ಮದ ಅಗತ್ಯತೆಯ ಕುರಿತು ಮೃದು ಮಧುರ ಶೈಲಿಯಲ್ಲಿ ಪ್ರಭಾಷಣ ಮಾಡಿದರು.
ಪ್ರಭಾಷಣದ ನಂತರ ನಡೆದ ಸಾಮೂಹಿಕ ಪ್ರಾರ್ಥನೆಗೆ ಅವರು ನೇತೃತ್ವ ನೀಡಿದರು. ಲೋಕಶಾಂತಿ, ಮನುಕುಲದ ಏಳಿಗೆ ಹಾಗೂ ಪಾಪವಿಮೋಚನೆಗಾಗಿ ನಡೆದ ಈ ಪ್ರಾರ್ಥನೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಕಣ್ಣೀರು ಸುರಿಸುತ್ತಾ ಪಾಲ್ಗೊಂಡಿದ್ದು ಕಂಡುಬಂತು.
ಉದ್ಯಾವರ ಸಾವಿರ ಜಮಾಹತ್ ಮಸೀದಿ, ಕುಂಜತ್ತೂರು, ಮಸೀದಿ, ಅದೇ ರೀತಿ ಪೊಸೋಟು, ಉಪ್ಪಳ, ಹೊಸಂಗಡಿ ಸೇರಿದಂತೆ ವಿವಿಧ ಭಾಗಗಳ ಜುಮಾ ಮಸೀದಿಗಳಲ್ಲಿ ರಾತ್ರಿಯಿಡೀ ಆರಾಧನೆಗಳು ನಡೆದವು.
ತರಾವೀಹ್ ನಮಾಜ್ ಬಳಿಕ ನಮಾಜ್ ಹಾಗೂ ಖಿಯಾಮುಲ್ಲೈಲ್, ಖತಮುಲ್ ಕುರಾನ್ ಪ್ರಾರ್ಥನೆಗಳು ನಡೆದವು.
ಮಸ್ಜಿದ್ ನೂರ್ ಸೇರಿದಂತೆ ಹಲವು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಭಕ್ತಾದಿಗಳಿಗೆ ಸಹರಿ ಮುಂಜಾನೆಯ ಆಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಪುಣ್ಯರಾತ್ರಿಯ ಅಂಗವಾಗಿ ಹಲವು ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮುಂಜಾನೆವರೆಗೂ ಮಸೀದಿಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಮಂಜೇಶ್ವರದಾದ್ಯಂತ ಆಧ್ಯಾತ್ಮಿಕ ವಾತಾವರಣ ಮನೆಮಾಡಿತ್ತು.