ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವಕ್ಕೆ ಆಹ್ವಾನ

ಕಾಸರಗೋಡು: ಚುಟುಕು ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಕವಿ-ಕವಯತ್ರಿಯರಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ವಿಶೇಷ ಸಾಹಿತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

2000ರಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಕೇರಳ ಗಡಿನಾಡ ಘಟಕವಾಗಿ ಸ್ಥಾಪಿತವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಳೆದ 26 ವರ್ಷಗಳಿಂದ ಚುಟುಕು ಸಾಹಿತ್ಯ ಹಾಗೂ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ 7 ಬಾರಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿರುವ ಹೆಗ್ಗಳಿಕೆ ಈ ಸಂಸ್ಥೆಗೆ ಸೇರಿದೆ.

ಇದೀಗ ಪರಿಷತ್ ಆಶ್ರಯದಲ್ಲಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಹಾಗೂ ಕನ್ನಡ ಗ್ರಾಮ, ಕಾಸರಗೋಡು ಇವರ ಸಹಯೋಗದಲ್ಲಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ 2026 ಮಾರ್ಚ್ 28ರಂದು ಶನಿವಾರ ಅಪರಾಹ್ನ 2.30ರಿಂದ 4.00ರವರೆಗೆ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದ ಗೋ-ಕುಟೀರದಲ್ಲಿ “ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ”ವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ ಹಾಗೂ ಮಕ್ಕಳ ಕವಿಗೋಷ್ಠಿ ನಡೆಯಲಿದ್ದು, ಜಿಲ್ಲೆಯ ಹಿರಿಯ ಹಾಗೂ ಕಿರಿಯ ಕವಿ-ಕವಯತ್ರಿಯರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಲು ಆಸಕ್ತರು ತಮ್ಮ ಹೆಸರು, ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಕಳುಹಿಸಬೇಕು. ಚುಟುಕುಗಳು, ಕವನಗಳು ಮತ್ತು ಮಕ್ಕಳ ಕವನಗಳ ವಾಚನಕ್ಕೆ ಅವಕಾಶ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಪರಿಷತ್ ಅಧ್ಯಕ್ಷರಾದ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:
ಮೊಬೈಲ್: 9448572016

SHARE
Loading spinner

Leave a Reply

Your email address will not be published. Required fields are marked *

error: Content is protected !!