ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡಿಗರು ತೋರಿಸುವ ಆತಿಥ್ಯ, ಪ್ರೀತ್ಯಾದರ ಹೃದಯಸ್ಪರ್ಶಿಯಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ರಂಗಭೂಮಿ ನಟ, ನಿರ್ದೇಶಕ ಹಾಗೂ ಸಾಹಿತಿ ನಾ. ನಾಗಚಂದ್ರ ಹೇಳಿದ್ದಾರೆ.
ನುಳ್ಳಿಪ್ಪಾಡಿಯ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ನಡೆಯುವ ಕನ್ನಡ ಭವನ ಗ್ರಂಥಾಲಯದಲ್ಲಿ “ಕನ್ನಡ ಪಯಸ್ವಿನಿ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದ ಹಲವಾರು ಭಾಗಗಳಿಗೆ ಭೇಟಿ ನೀಡಿದ ಅನುಭವದಲ್ಲಿಯೂ ಕಾಸರಗೋಡಿನಂತಹ ಪ್ರೀತಿ, ಗೌರವ ಎಲ್ಲಿಯೂ ಸಿಗಲಿಲ್ಲ ಎಂದು ಹೇಳಿದರು.
ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹಾಗೂ ನಾಡೋಜ ಡಾ. ಕಯ್ಯಾರ ಅವರಂತಹ ಮಹನೀಯರ ನೆಲವಾದ ಕಾಸರಗೋಡು, ಬೇಕಲ ಕೋಟೆಯಂತೆ ಕನ್ನಡದ ಘನತೆ-ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದರು.
ಇಲ್ಲಿನ ಕನ್ನಡಿಗರ ಹೋರಾಟ ಶ್ಲಾಘನೀಯವಾಗಿದ್ದು, ಕನ್ನಡದ ವಿರುದ್ಧ ನಡೆಯುವ ಯಾವುದೇ ಅನ್ಯಾಯವನ್ನು ಖಂಡಿಸಬೇಕಾಗಿದೆ. ಗಡಿನಾಡಿನ ಕನ್ನಡ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026” ಪ್ರದಾನಿಸಲಾಯಿತು. ಅವರೊಂದಿಗೆ ಪತ್ನಿ ಅನುಸೂಯ ನಾಗಚಂದ್ರ, ಪುತ್ರ ಅಮೋಘವರ್ಷ ಮತ್ತು ಪುತ್ರಿ ಅಪೇಕ್ಷಾ ಉಪಸ್ಥಿತರಿದ್ದರು.
40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಾ. ನಾಗಚಂದ್ರ ಅವರು ಮಾಜಿ ನಾಟಕ ಅಕಾಡೆಮಿ ಸದಸ್ಯರಾಗಿದ್ದು, ಕನ್ನಡ ಭವನ ಗ್ರಂಥಾಲಯಕ್ಕೆ ಸುಮಾರು 406 ಪುಸ್ತಕಗಳನ್ನು ದೇಣಿಗೆ ನೀಡಿರುವುದು ವಿಶೇಷ.