ಕಾಸರಗೋಡು: ಸಪ್ತ ಭಾಷಾ ಸಂಗಮ ಭೂಮಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಭರ್ಜರಿ ರೋಡ್ ಶೋ ನಡೆಸಿ ಇಂದು ನಾಮಪತ್ರ ಸಲ್ಲಿಸಿದರು.
ಕರಂದಕ್ಕಾಡು ಮೈದಾನದಿಂದ ಆರಂಭವಾದ ರೋಡ್ ಶೋ ಭಾರೀ ಜನಸಾಗರದ ಮಧ್ಯೆ ಸಾಗಿದ್ದು, ಸಾರ್ವಜನಿಕ ಮೆರವಣಿಗೆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು. ಮೆರವಣಿಗೆಯಲ್ಲಿ ಪಕ್ಷದ ಧ್ವಜಗಳು, ಘೋಷಣೆಗಳು ಮತ್ತು ಭರ್ಜರಿ ಸ್ವಾಗತದ ನಡುವೆ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಗಮನಸೆಳೆದರು
.
ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಎಡನೀರು ಮಠಕ್ಕೆ ಭೇಟಿ ನೀಡಿ ಎಡನೀರು ಶ್ರೀಗಳವರಿಂದ ಮಂತ್ರಾಕ್ಷತೆ ಪಡೆದರು. ಬಳಿಕ ಮೆರವಣಿಗೆಯೊಂದಿಗೆ ತೆರಳಿ ಆರ್‌ಡಿಒ ಬಿನು ಜೋಸೆಫ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ. ಸುರೇಂದ್ರನ್, ಗುರುರಾಜ ಗಂಟಿಹೊಳೆ, ಹರೀಶ್ ಪೂಂಜ, ಪ್ರಶಾಂತ್ ಠಾಕೂರ್, ಸತೀಶ್ ಕುಂಪಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಚಿತ್ರ ನಟಿ ಹರ್ಷಿಕಾ ಪೂಣಚ್ಚ ಸಹ ಭಾಗವಹಿಸಿದ್ದರು.
ಇದೇ ವೇಳೆ ಬಿಜೆಪಿ ಮುಖಂಡರಾದ ಕೆ. ಶ್ರೀಕಾಂತ್, ಕುಂಟಾರು ರವೀಶ ತಂತ್ರಿ, ಗಣೇಶ ಪಾರೆಕಟ್ಟೆ, ನ್ಯಾಯವಾದಿ ಕರುಣಾಕರನ್ ನಾಯರ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.