ಮಂಜೇಶ್ವರ: ಕೇರಳ ಜಲ ಪ್ರಾಧಿಕಾರದ ಆಡಳಿತಾತ್ಮಕ ದೋಷವೊಂದು ಇದೀಗ ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ನೀರಿನ ಸಂಪರ್ಕವನ್ನು ಅಧಿಕೃತವಾಗಿ ಕಡಿತಗೊಳಿಸಿ, ಬಾಕಿ ಮೊತ್ತವನ್ನೂ ಸಂಪೂರ್ಣವಾಗಿ ಪಾವತಿಸಿದ ಬಳಿಕವೂ ಗ್ರಾಹಕನೊಬ್ಬನಿಗೆ ಸಾವಿರಾರು ರೂಪಾಯಿ ಬಿಲ್ ಕಳುಹಿಸಿರುವ ಘಟನೆ ಮಂಜೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಮಂಜೇಶ್ವರ ಚೌಕಿ ನಿವಾಸಿ, ದೃಶ್ಯ ಮಾಧ್ಯಮ ಕ್ಯಾಮರಾಮನ್ ಮೊಹಮ್ಮದ್ ಹನೀಫ್ ಈ ಸಮಸ್ಯೆಗೆ ಒಳಗಾದ ಗ್ರಾಹಕರಾಗಿದ್ದಾರೆ.
ಹನೀಫ್ ಅವರು ನಿಯಮಾನುಸಾರವಾಗಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಇಲಾಖೆಗೆ ಅರ್ಜಿ ಸಲ್ಲಿಸಿ, ಅಂದಿನವರೆಗೆ ಬಾಕಿ ಇದ್ದ ಸಂಪೂರ್ಣ ಮೊತ್ತವನ್ನು ಪಾವತಿಸಿದ್ದರು. ಬಳಿಕ ಅಧಿಕೃತವಾಗಿ ಸಂಪರ್ಕವೂ ರದ್ದುಗೊಂಡಿತ್ತು. ಆದಾಗ್ಯೂ, ಇದೀಗ ಅವರಿಗೆ ₹4,315 ಮೊತ್ತದ ಬಿಲ್ ಕಳುಹಿಸಿರುವುದು ಆಶ್ಚರ್ಯ ಹುಟ್ಟಿಸಿದೆ.
ಈ ಘಟನೆ ಒಬ್ಬರಷ್ಟಕ್ಕೆ ಸೀಮಿತವಾಗಿಲ್ಲ. ಮಂಜೇಶ್ವರ ಭಾಗದ ಇನ್ನೂ ಹಲವು ಗ್ರಾಹಕರಿಗೂ ಇದೇ ರೀತಿಯ ಬಿಲ್‌ಗಳು ಬರುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ. ಸಂಪರ್ಕ ಕಡಿತಗೊಂಡ ಬಳಿಕವೂ ಬಿಲ್ ಬರುತ್ತಿರುವುದು ಇಲಾಖೆಯ ದಾಖಲೆ ನಿರ್ವಹಣೆಯ ದೋಷ ಅಥವಾ ತಾಂತ್ರಿಕ ತೊಂದರೆಯನ್ನು ಸೂಚಿಸುತ್ತದೆ.
“ಬಾಕಿ ಮೊತ್ತ ಪಾವತಿಸಿ ಸಂಪರ್ಕ ಕಡಿತಗೊಳಿಸಿದ ಬಳಿಕವೂ ಬಿಲ್ ಬರುತ್ತಿರುವುದು ಹೇಗೆ? ಇಲಾಖೆಯ ದಾಖಲೆಗಳು ಸರಿಯಾಗಿ ನವೀಕರಣಗೊಳ್ಳುತ್ತಿಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕಚೇರಿಗೆ ಹೋದರೂ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಈ ಹಿನ್ನೆಲೆ, ಸಮಸ್ಯೆಗೆ ನ್ಯಾಯ ದೊರಕಿಸಿಕೊಳ್ಳುವ ಉದ್ದೇಶದಿಂದ ಮೊಹಮ್ಮದ್ ಹನೀಫ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.