ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ, ಗಡಿ ನಾಡು ಮಂಜೇಶ್ವರದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಕುತೂಹಲದ ಘಟ್ಟ ತಲುಪಿದೆ. ಇಲ್ಲಿನ ಸಾಂಪ್ರದಾಯಿಕ ತ್ರಿಕೋನ ಸ್ಪರ್ಧೆಯು ಹೊಸ ತಿರುವು ಪಡೆದುಕೊಂಡಿದ್ದು, 2006ರ ಚುನಾವಣಾ ಫಲಿತಾಂಶ ಮರುಕಳಿಸುವ ಮುನ್ಸೂಚನೆಗಳು ದಟ್ಟವಾಗುತ್ತಿದೆ.
ಸ್ಥಳೀಯ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಈ ಬಾರಿಯ ವಿಶೇಷವೆಂದರೆ ಯುಡಿಎಫ್ ಮತ್ತು ಎಲ್‌ಡಿಎಫ್ ಎರಡೂ ರಂಗಗಳು ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರುವುದು. ಇದು ಮತದಾರರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪ್ರಚಾರದಲ್ಲಿ ಸದ್ಯ ಮುಂಚೂಣಿಯಲ್ಲಿದ್ದು, “ಸ್ಥಳೀಯತೆ” ಮತ್ತು “ಅಭಿವೃದ್ಧಿ”ಯ ಮಂತ್ರವನ್ನು ಜಪಿಸುತ್ತಿದ್ದಾರೆ.
ಪ್ರಚಾರದ ವೇಳೆ ಮಾತನಾಡುತ್ತಿರುವ ಜಯಾನಂದ ಅವರು, 2006ರಲ್ಲಿ ಸಿ.ಎಚ್. ಕುoಞಬು ಅವರು ಸಾಧಿಸಿದ ಐತಿಹಾಸಿಕ ಗೆಲುವನ್ನು ಈ ಬಾರಿ ತಾವೂ ಪುನರಾವರ್ತಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಮಾಡಿದ ಜನಪರ ಸಾಧನೆಗಳು ಮತ್ತು ಅಭಿವೃದ್ಧಿ ಕೆಲಸಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬುದು ಅವರ ನಂಬಿಕೆ.
ಮಂಜೇಶ್ವರದ ಈ ಬಾರಿಯ ಕದನದಲ್ಲಿ ಕೆಲವು ಅಚ್ಚರಿಯ ಬೆಳವಣಿಗೆಗಳು ಕಂಡುಬರುತ್ತಿವೆ. ಯುಡಿಎಫ್‌ಗೆ ಸಾಂಪ್ರದಾಯಿಕವಾಗಿ ಹೋಗುತ್ತಿದ್ದ ಮತಗಳಲ್ಲಿ ಈ ಬಾರಿ ಒಡಕು ಕಾಣುವ ಸಾಧ್ಯತೆಯಿದೆ. ಎಸ್‌ಡಿಪಿಐ ಕಾರ್ಯಕರ್ತರು ಈ ಬಾರಿ ಎಲ್‌ಡಿಎಫ್‌ಗೆ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿರುವುದು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ.
ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಯುಡಿಎಫ್ ತನ್ನ ಪಾರಮ್ಯವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದೆ. ಆದರೆ ಎಡರಂಗದ ಚುರುಕಿನ ಪ್ರಚಾರ ಈ ಎರಡೂ ಪಕ್ಷಗಳಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.
ಸದ್ಯದ ಮಂಜೇಶ್ವರದ ಟ್ರೆಂಡ್ ಗಮನಿಸಿದರೆ, ಮತದಾರರು ಅಭಿವೃದ್ಧಿ ಮತ್ತು ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡುವಂತೆ ಕಾಣುತ್ತಿದೆ. ಕೆ.ಆರ್. ಜಯಾನಂದ ಅವರ ಪರವಾಗಿ ಬೀಸುತ್ತಿರುವ ಗಾಳಿಯು ಎಡರಂಗಕ್ಕೆ ದಶಕಗಳ ನಂತರ ಮಂಜೇಶ್ವರದ ಗದ್ದುಗೆಯನ್ನು ಮರಳಿ ನೀಡುತ್ತದೆಯೇ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.