ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮಂಜೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮಾಂತೆರೋ ಅವರು ಅಂತಿಮ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆಗೆ ಹೊಸ ತಿರುವು ನೀಡಿದೆ.
ಈ ಬೆಳವಣಿಗೆ ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬದಲಾಯಿಸುವ ಸಾಧ್ಯತೆಯಿದ್ದು, ವಿಶೇಷವಾಗಿ ಬಿಜೆಪಿಗೆ ಇದು ಅನುಕೂಲಕರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಧಕ್ಕೆಯಾಗುವ ಭೀತಿಯಲ್ಲಿ ಯುಡಿಎಫ್ ಪಾಳೆಯದಲ್ಲಿ ಆತಂಕ ಮನೆಮಾಡಿದೆ.
ಮಂಜೇಶ್ವರ ಕ್ಷೇತ್ರದಲ್ಲಿ ಸುಮಾರು 7,000 ಕ್ರಿಶ್ಚಿಯನ್ ಮತದಾರರಿದ್ದು, ಜೀನ್ ಲವಿನಾ ಮಾಂತೆರೋ ಅವರು ಈ ಸಮುದಾಯದ ಪ್ರಭಾವಿ ನಾಯಕಿಯಾಗಿರುವುದರಿಂದ ಅವರ ಸ್ಪರ್ಧೆ ಮತಗಳ ದಿಕ್ಕನ್ನು ನಿರ್ಧರಿಸುವ ಪ್ರಮುಖ ಅಂಶವಾಗಬಹುದು.
ತಮ್ಮ ಸ್ಪರ್ಧೆಗೆ ಬಿಜೆಪಿ ಬೆಂಬಲವಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಜೀನ್, “ಸಮುದಾಯದ ಅಭಿವೃದ್ಧಿ ಮತ್ತು ದೀರ್ಘಕಾಲದ ನಿರ್ಲಕ್ಷ್ಯದ ವಿರುದ್ಧ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. ಪಂಚಾಯತ್ ಅಧ್ಯಕ್ಷೆಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳೇ ತಮ್ಮ ಬಲ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಜೀನ್ ಲವಿನಾ ಮಾಂತೆರೋ ಅವರು ವರ್ಕಾಡಿ ಚರ್ಚ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ್ದು, ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಬೆಳವಣಿಗೆ ಕ್ಷೇತ್ರದ ಇತರೆ ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ.