ಮಂಜೇಶ್ವರ: ಕೇರಳದ ಒಂದನೇ ವಿಧಾನಸಭಾ ಕ್ಷೇತ್ರವಾದ ಮಂಜೇಶ್ವರದಲ್ಲಿ ಈ ಬಾರಿ ನಡೆದ ಚುನಾವಣೆ ಕೇವಲ ಮತದಾನವಾಗಿ ಉಳಿಯದೆ, ಒಂದು ಚಾರಿತ್ರಿಕ ದಾಖಲೆಯಾಗಿ ಹೊರಹೊಮ್ಮಿದೆ. ಎಂದೂ ಕಾಣದ ಆವೇಶ, ಮತದಾರರ ಅದಮ್ಯ ಉತ್ಸಾಹ ಮತ್ತು ತಾಂತ್ರಿಕ ಸವಾಲುಗಳ ನಡುವೆ ನಡೆದ ಈ ಬಾರಿಯ ಮತಸಮರದಲ್ಲಿ ಬರೋಬ್ಬರಿ ಶೇ. 81.04 ಮತದಾನವಾಗುವ ಮೂಲಕ ಫಲಿತಾಂಶದ ಕುತೂಹಲವನ್ನು ಶಿಖರಕ್ಕೇರಿಸಿದೆ.
ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ ಚುನಾವಣೆಯಲ್ಲಿ 76.33 ಶೇ. ಮತದಾನ ನಡೆದಿತ್ತು. ಬಳಿಕ 2021ರಲ್ಲಿ ನಡೆದ ಚುನಾವಣೆಯಲ್ಲಿ 77.77 ಶೇ ಮತದಾನವಾಗಿತ್ತು. ಇದೀಗ ಪರಿಷ್ಕೃತ ಮತದಾರರ ಪಟ್ಟಿಯಂತೆ ನಡೆದ 2026 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮಂಜೇಶ್ವರದ ಮತದಾನ 81.04 ಶೇ. ತಲುಪಿದೆ. ಇದು ಕಾಸರಗೋಡು ಜಿಲ್ಲೆಯಲ್ಲೇ ಅತ್ಯಧಿಕ ಮತದಾನವಾಗಿದೆ.
ಸಾಮಾನ್ಯವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಬೇಕಿದ್ದ ಮತದಾನ ಪ್ರಕ್ರಿಯೆ, ಮಂಜೇಶ್ವರದ ಇತಿಹಾಸದಲ್ಲೇ ಮೊದಲ ಬಾರಿಗೆ ರಾತ್ರಿ 8.15ರ ವರೆಗೂ ಮುಂದುವರಿಯಿತು. ಹೊಸಬೆಟ್ಟು ಕಡಪ್ಪರ, ವರ್ಕಾಡಿ, ಬಾಕ್ರಬೈಲು, ಕುಂಜತ್ತೂರು ಹಾಗೂ ತೂಮಿನಾಡು ಭಾಗದ ಮತಗಟ್ಟೆಗಳಲ್ಲಿ ಸಂಜೆಯ ನಂತರವೂ ಮತದಾರರ ದಂಡೇ ಹರಿದುಬಂದಿರುವುದು ನಿಯಮದಂತೆ ಗಡುವಿನೊಳಗೆ ಬಂದ ಪ್ರತಿಯೊಬ್ಬರಿಗೂ ಮತದಾನಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ, ಸತತ 13.5 ಗಂಟೆಗಳ ಕಾಲ ಮತದಾನ ನಡೆಯುವ ಮೂಲಕ ಹೊಸ ದಾಖಲೆ ನಿರ್ಮಾಣವಾಯಿತು.
ಈ ಬಾರಿ ಮತದಾನ ವಿಳಂಬವಾಗಲು ಪ್ರಮುಖವಾಗಿ ಎರಡು ಕಾರಣಗಳು ಮುನ್ನೆಲೆಗೆ ಬಂದಿವೆ:
ಹಲವು ಮತಗಟ್ಟೆಗಳಲ್ಲಿ ಇವಿಎಂ (EVM) ಯಂತ್ರಗಳು ಮಂದಗತಿಯಲ್ಲಿ ಕಾರ್ಯನಿರ್ವಹಿಸಿದವು. ಒಬ್ಬರು ಮತ ಚಲಾಯಿಸಿದ ನಂತರ ‘ಬೀಪ್’ ಶಬ್ದ ಬರಲು ಒಂದರಿಂದ ಎರಡು ನಿಮಿಷ ಬೇಕಾಗುತ್ತಿತ್ತು. ಇದು ಪ್ರಕ್ರಿಯೆಯನ್ನು ವಿಪರೀತ ವಿಳಂಬಗೊಳಿಸಿತು.
ಕಡು ಬಿಸಿಲಿನಿಂದ ಪಾರಾಗಲು ಮತದಾರರು ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿದ್ದು ವಿಳಂಬಕ್ಕೆ ಮತ್ತೊಂದು ಕಾರಣವಾಯಿತು.
ಜಿಲ್ಲಾ ಚುನಾವಣಾ ಆಯೋಗದ ತಾತ್ಕಾಲಿಕ ಮಾಹಿತಿಯಂತೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಶೇ. 78.67 ಮತದಾನವಾಗಿದ್ದರೆ, ಮಂಜೇಶ್ವರ ಮಾತ್ರ ಶೇ. 80.64ರಷ್ಟು ಭರ್ಜರಿ ಮತದಾನ ದಾಖಲಿಸಿದೆ. ಮಂಜೇಶ್ವರದ ಈ ಶೇಕಡಾವಾರು ಹೆಚ್ಚಳವು ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇರುವುದನ್ನು ಸೂಚಿಸುತ್ತಿದೆ. ಈ ಭಾರಿ ಮತದಾರ ಯಾರ ಮುಡಿಗೆ ಗೆಲುವಿನ ಮಾಲೆ ತೊಡಿಸಲಿದ್ದಾನೆ ಎಂಬುದು ಈಗ ದೇಶದಾದ್ಯಂತ ಕುತೂಹಲ ಮೂಡಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿರುವುದು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿಯೋ ಅಥವಾ ಹಾಲಿ ಪ್ರತಿನಿಧಿಯ ಪರವಾದ ಒಲವೋ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಗಡಿಭಾಗದ ಈ ಸೂಕ್ಷ್ಮ ಕ್ಷೇತ್ರದಲ್ಲಿ ದಾಖಲಾದ ಈ ದಾಖಲೆ ಮತದಾನವು ಅಭ್ಯರ್ಥಿಗಳ ಎದಬಡಿತವನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಒಟ್ಟಿನಲ್ಲಿ, ಮಂಜೇಶ್ವರದ ಮತದಾರ ಪ್ರಭು ತನ್ನ ತೀರ್ಪನ್ನು ಇವಿಎಂ ಯಂತ್ರದಲ್ಲಿ ಭದ್ರವಾಗಿ ಲಾಕ್ ಮಾಡಿದ್ದಾನೆ. ಆ ತೀರ್ಪು ಯಾರ ಪಾಲಿಗೆ ‘ಮಂಗಳ’ ಹಾಡಲಿದೆ ಎಂಬುದು ಫಲಿತಾಂಶದ ದಿನವೇ ಸ್ಪಷ್ಟವಾಗಲಿದೆ.