ಮಂಜೇಶ್ವರ: ಗಲ್ಫ್ ರಾಷ್ಟ್ರಗಳಲ್ಲಿ ಇರುವ ಭಕ್ತರ ಕಲ್ಯಾಣಕ್ಕಾಗಿ ಬಲ್ಲಂಗುಡೆಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ ಹಾಗೂ ಪ್ರಾರ್ಥನೆ ಕಾರ್ಯಕ್ರಮವು ಏಪ್ರಿಲ್ 10ರಂದು ಭಕ್ತಿಭಾವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ಶ್ರೀ ಪಾಡಂಗರೆ ಭಗವತಿ ಭಕ್ತವೃಂದ ಗಲ್ಫ್ ವತಿಯಿಂದ ಆಯೋಜಿಸಲಾಗಿತ್ತು.
ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಭಕ್ತರ ಸುಖಶಾಂತಿ ಮತ್ತು ಉದ್ಯೋಗ ಭದ್ರತೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉದ್ಯೋಗ ಕಳೆದುಕೊಳ್ಳದಂತೆ, ಈಗಾಗಲೇ ಕಳೆದುಕೊಂಡವರಿಗೆ ಮರು ಉದ್ಯೋಗ ದೊರಕಲೆಂದು ಹಾಗೂ ಯುದ್ಧ ಶಮನವಾಗಿ ಎಲ್ಲರಿಗೂ ಕಲ್ಯಾಣವಾಗಲೆಂದು ಭಕ್ತರು ಆರಾಧ್ಯ ದೇವಿ ಶ್ರೀ ಪಾಡಂಗರೆ ಭಗವತಿ ಅಮ್ಮನಲ್ಲಿ ಪ್ರಾರ್ಥಿಸಿದರು.
ಕ್ಷೇತ್ರದ ಪೂಜಾರಿಯಾದ ಶ್ರೀ ನಾರಾಯಣ ಭಗವತಿ ಪೂಜಾರಿಯವರು ವಿಶೇಷ ಪೂಜೆ ಹಾಗೂ ದೀಪಾರಾಧನೆ ನೆರವೇರಿಸಿದರು. ಈ ವೇಳೆ ಕ್ಷೇತ್ರದ ಅನುವಂಶಿಕ ಅಚ್ಚಮಾರರು, ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಬಲ್ಲಂಗುಡೆಲು, ಸಮಿತಿಯ ಪದಾಧಿಕಾರಿಗಳು ಹಾಗೂ ಶ್ರೀ ಪಾಡಂಗರೆ ಭಗವತಿ ಭಕ್ತವೃಂದ ಗಲ್ಫ್ನ ಸದಸ್ಯರು ಉಪಸ್ಥಿತರಿದ್ದರು.
ಈ ಧಾರ್ಮಿಕ ಕಾರ್ಯಕ್ರಮ ಭಕ್ತರಲ್ಲಿ ಭರವಸೆ ಮತ್ತು ಆತ್ಮಸ್ಥೈರ್ಯ ಮೂಡಿಸಿದಂತಾಯಿತು.