ಮಂಜೇಶ್ವರ :
ಕಾಸರಗೋಡು ಜಿಲ್ಲೆಯ ಗಡಿ ಭಾಗವಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ. ಅರಬ್ಬಿ ಸಮುದ್ರದ ನೀಲಿ ಅಲೆಗಳು ಹಾಗೂ ಹಸಿರು ಪ್ರಕೃತಿಯ ನಡುವೆ ಇರುವ ಈ ಕಡಲತೀರವು ಬೇಸಿಗೆ ರಜೆಯ ಸಂದರ್ಭದಲ್ಲಿಯೇ ಜನರಿಂದ ಕಿಕ್ಕಿರಿದು ತುಂಬುತ್ತಿದೆ.
ಈ ತಾಣದ ಪ್ರಮುಖ ಆಕರ್ಷಣೆ ‘ಓಷನ್ ವಾಟರ್ ಪಾರ್ಕ್’ ಆಗಿದ್ದು, ಶಾಲಾ ರಜೆಯ ಸಂಭ್ರಮದಲ್ಲಿರುವ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಮನರಂಜನೆಯ ಕೇಂದ್ರವಾಗಿದೆ. ಮಕ್ಕಳಿಗಾಗಿ ಸುರಕ್ಷಿತ ಸ್ಲೈಡ್ಗಳು ಹಾಗೂ ವಿವಿಧ ಜಲ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ.
ಸಮುದ್ರದ ತಂಗಾಳಿ, ಹಸಿರು ಪರಿಸರ ಮತ್ತು ಸುಂದರ ಛಾಯಾಚಿತ್ರಗಳಿಗೆ ಸೂಕ್ತ ಸ್ಥಳಗಳಿರುವುದರಿಂದ ಪ್ರವಾಸಿಗರಿಗೆ ವಿಶ್ರಾಂತಿ ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುತ್ತಿದೆ. ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ.
ಜಿಲ್ಲೆಯ ಇತರ ಬೀಚ್ಗಳ ಪೈಪೋಟಿಯ ನಡುವೆಯೂ ಕುಂಡು ಕೊಳಕೆ ತನ್ನ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತಿದ್ದು, ಪ್ರವಾಸಿಗರ ಹರಿವು ಸ್ಥಳೀಯ ಆರ್ಥಿಕತೆಗೆ ಸಹಾಯವಾಗುತ್ತಿದೆ. ರಜಾ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ಗಮನದಲ್ಲಿಟ್ಟು ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.