ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರಾಜಕತೆ: ಅಪರಾಧಿ-ಮಾದಕ ದಂಧೆಗಾರರಿಗೆ ಪೊಲೀಸ್ ರಕ್ಷಣೆ ಆರೋಪ

ಕುಂಬಳೆ: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅಪರಾಧಿ ಗುಂಪುಗಳು ಹಾಗೂ ಮಾದಕ ದ್ರವ್ಯ ಮಾಫಿಯಾಗಳಿಗೆ ಪೊಲೀಸರು ಪರೋಕ್ಷ ರಕ್ಷಣೆ ನೀಡುತ್ತಿದ್ದಾರೆ ಎಂದು ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ಮುಖಂಡ ಅಶ್ರಫ್ ಕಾರ್ಲ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಇದು ಒಂಟಿ ಘಟನೆ ಅಲ್ಲ, ಈ ಹಿಂದೆ ಸಹ ಅನೇಕ ಕೊಲೆ ಪ್ರಕರಣಗಳು ನಡೆದಿದ್ದರೂ ಅವುಗಳನ್ನು ತಡೆಯಲು ಅಥವಾ ಆರೋಪಿಗಳನ್ನು ಕಾನೂನು ಮುಂದೆ ತರುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.

ಮಾದಕ ದ್ರವ್ಯ ಮಾಫಿಯಾ ದಿನೇದಿನೇ ಬಲವಾಗುತ್ತಿದೆಯಾದರೂ ಅವರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ತಮ್ಮ ಠಾಣಾ ವ್ಯಾಪ್ತಿಯ ಜನರಿಗೆ ರಕ್ಷಣೆ ನೀಡಲೂ ಸಾಧ್ಯವಾಗದಿರುವುದು ಲಜ್ಜಾಸ್ಪದ ಎಂದು ಹೇಳಿದರು.

ಪ್ರದೇಶದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಆದರೆ ಒಂದೇ ಪ್ರಕರಣದಲ್ಲಿಯೂ ಸುಳಿವು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತಮ್ಮ ವೈಫಲ್ಯ ಮುಚ್ಚಿಹಾಕಲು ನಿರಪರಾಧಿಗಳನ್ನು ಕಿರುಕುಳ ನೀಡುವುದು ಹಾಗೂ ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಎಂಡಿಎಮ್ಎ, ಗಾಂಜಾ ಸೇರಿದಂತೆ ಅಪಾಯಕಾರಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ವ್ಯಾಪಕವಾಗಿದ್ದರೂ, ಇದರ ಹಿಂದಿರುವ ದೊಡ್ಡ ಜಾಲವನ್ನು ಬಯಲಿಗೆಳೆಯುವ ಬದಲು ಸಾಮಾನ್ಯ ಜನರನ್ನು ತಡೆದು ನಿಲ್ಲಿಸಿ ಪ್ರಶ್ನಿಸುವ ಹೆಸರಿನಲ್ಲಿ ಅವಮಾನಿಸಲಾಗುತ್ತಿದೆ ಎಂದು ಟೀಕಿಸಿದರು.

ವರ್ಧಿಯಲ್ಲಿ ಇರುವ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಯಾವುದೇ ರೀತಿಯಲ್ಲೂ ಒಪ್ಪಲಾಗದು. ಅಪರಾಧಿಗಳು ಕಾನೂನಿನ ಲೋಪಗಳನ್ನು ಬಳಸಿಕೊಂಡು ತಪ್ಪಿಸಿಕೊಳ್ಳಲು ಪೊಲೀಸ್ ವ್ಯವಸ್ಥೆಯೇ ಅವಕಾಶ ಕಲ್ಪಿಸುತ್ತಿದೆ ಎಂದು ಹೇಳಿದರು.

ಪ್ರದೇಶದ ವ್ಯಾಪಾರ ಸಂಸ್ಥೆಗಳನ್ನು ಹಾಳು ಮಾಡಲು ಸಂಚು ರೂಪಿಸುವ ಗುಂಪುಗಳು ಬೆಳೆಯುತ್ತಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕುಂಬಳೆಯಲ್ಲಿನ ಈ ಅರಾಜಕತೆಯನ್ನು ಕೊನೆಗೊಳಿಸಿ ಜನರು ಭಯರಹಿತವಾಗಿ ಬದುಕುವ ವಾತಾವರಣ ನಿರ್ಮಿಸಲು ಗೃಹ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅಶ್ರಫ್ ಕಾರ್ಲ ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!