ಮಂಜೇಶ್ವರ: ಕಾರಡ್ಕ ಕಾರ್ಲೆಯಲ್ಲಿ ಆಟವಾಡುತ್ತಾ ಮನೆಯ ಅಂಗಳದಲ್ಲಿ ಸಂಭ್ರಮಿಸಬೇಕಿದ್ದ ಕಂದನೊಬ್ಬ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.
ಲೋಹಿತ್ ಶೆಟ್ಟಿ-ದಿವ್ಯ ದಂಪತಿಯ ಎರಡೂವರೆ ವರ್ಷದ ಪುತ್ರ ದೇವನಂದ ಸಾವನ್ನಪ್ಪಿದ ದುರ್ದೈವಿ.
ನಾಪತ್ತೆಯಾಗಿದ್ದ ಬಾಲಕನಿಗಾಗಿ ಹುಡುಕಾಟ ನಡೆಸಿದಾಗ, ಮನೆಯಿಂದ 300 ಮೀಟರ್ ದೂರದ ತೆಂಗಿನ ತೋಟದ ಆವರಣವಿಲ್ಲದ ಕೆರೆಯಲ್ಲಿ ಶವ ಪತ್ತೆಯಾಗಿದೆ. ಆಟವಾಡುತ್ತಾ ಹೋಗಿದ್ದ ಮಗು, ನೀರಿನ ಸೆಳೆತಕ್ಕೆ ಸಿಲುಕಿ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಚೆಂಗಳದ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಸುರಕ್ಷಿತ ಕೆರೆ ಒಂದು ಮುದ್ದು ಕಂದನ ಜೀವ ಕಸಿದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.