ಕುಂಬಳೆ, ಜೂನ್ 4: ಅನಂತಪುರ ಕೈಗಾರಿಕಾ ಪಾರ್ಕ್ನ ಕಾರ್ಖಾನೆಗಳಿಂದ ಹೊರಹೊಮ್ಮುತ್ತಿರುವ ದುರ್ವಾಸನೆಯನ್ನು ತಕ್ಷಣ ನಿಯಂತ್ರಿಸಲು ಸಂಬಂಧಿತ ಅಧಿಕಾರಿಗಳು ಮಧ್ಯಪ್ರವೇಶಿಸಬೇಕು ಹಾಗೂ ಮಾನವ ಜೀವ ಮತ್ತು ಆಸ್ತಿಗೆ ಅಪಾಯಕಾರಿಯಾಗಿರುವ ಕೈಗಾರಿಕೆಗಳನ್ನು ಮುಚ್ಚಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ.
ಕುಂಬಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ಅನಂತಪುರ ಕೈಗಾರಿಕಾ ಪಾರ್ಕ್ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸದಾಗಿ ಆರಂಭಗೊಳ್ಳಲಿರುವ ಕೈಗಾರಿಕೆಗಳಿಗೆ ಅನುಮತಿ ನೀಡಬಾರದು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಾಲಿನ್ಯಯುಕ್ತ ನೀರು ಹರಿದು ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ದೂರಿದರು.
ಕೈಗಾರಿಕೆಗಳ ಹೆಸರಿನಲ್ಲಿ ಪ್ರದೇಶದಿಂದ ಇತರೆ ರಾಜ್ಯಗಳಿಗೆ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜೂನ್ 8ರಂದು ಅನಂತಪುರ ಕೈಗಾರಿಕಾ ಪಾರ್ಕ್ಗೆ ಮೆರವಣಿಗೆ ಹಾಗೂ ಧರಣಿ ನಡೆಸಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಶರೀಫ್, ಸಂಚಾಲಕ ಸುನೀಲ್ ಕುಮಾರ್, ಉಪಾಧ್ಯಕ್ಷ ಎ.ಕೆ. ಅಶ್ರಫ್, ನಾಸರ್ ಕೆ.ಎಂ. ಹಾಗೂ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.