ಕಾಸರಗೋಡು: ಬೇಕಲ ಕೋಟೆ ಸಮೀಪದ ಪಳ್ಳಿಕರೆ ಬೀಚ್ನಲ್ಲಿ ಭಾನುವಾರ ಸಂಜೆ ನಡೆದ ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾಗಿದ್ದಾರೆ. ಕೊಟ್ಟಾಯಂ ಚಂಗನಾಶೇರಿಯ ನಿವಾಸಿಗಳಾದ ಅಂಗಿತ್ (20) ಮತ್ತು ಅಪ್ಪು ಟಿ. ಎಬ್ರಹಾಂ (20) ಕಾಣೆಯಾದ ವಿದ್ಯಾರ್ಥಿಗಳು.
ಘಟನೆ ನಡೆದಾಗ ನಾಲ್ವರು ವಿದ್ಯಾರ್ಥಿಗಳ ತಂಡ ಸಮುದ್ರದಲ್ಲಿ ಈಜಲು ಇಳಿದಿತ್ತು. ಈ ವೇಳೆ ಬಲವಾದ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಉಳಿದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ ಸುಮಾರು 6:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ವಿಷಯ ತಿಳಿದ ತಕ್ಷಣವೇ ಸ್ಥಳೀಯರು ಮತ್ತು ಬೇಕಲ ಪೊಲೀಸರು ಧಾವಿಸಿ ಬಂದು ಸಮುದ್ರದಲ್ಲಿ ವ್ಯಾಪಕ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.
ವಿದ್ಯಾರ್ಥಿಗಳ ಪತ್ತೆಯಾಗಿ ಶೋಧನೆ ಮುಂದುವರಿದಿದೆ. ಈ ಘಟನೆಯು ಪ್ರವಾಸಿಗರ ಭದ್ರತೆಯ ಕುರಿತು ಮತ್ತೊಮ್ಮೆ ಆತಂಕವನ್ನು ಹುಟ್ಟುಹಾಕಿದೆ.