ಸಮುದ್ರ ಪಾಲಾದ ಇಬ್ಬರು ಯುವಕರ ಮೃತದೇಹ ಪತ್ತೆ

ಕಾಸರಗೋಡು: ಬೇಕಲ ಕೋಟೆ ಸಮೀಪದ ಪಳ್ಳಿಕೆರೆ ಸಮುದ್ರ ತೀರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ಮಧ್ಯಾಹ್ನ ಪತ್ತೆಯಾಗಿವೆ.

ಮೃತರನ್ನು ಕೊಟ್ಟಾಯಂ ಜಿಲ್ಲೆಯ ಚಂಗನಕ್ಕೇರಿ ಮೂಲದ ಅಪ್ಪುಟಿ ಅಬ್ರಹಾಂ (20) ಹಾಗೂ ಅಂಕಿತ್ (20) ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ನಾಲ್ವರು ಯುವಕರು ಕೊಟ್ಟಾಯಂನಿಂದ ಪಳ್ಳಿಕೆರೆ ಸಮುದ್ರ ತೀರಕ್ಕೆ ಆಗಮಿಸಿ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿದ ನಾಲ್ವರಲ್ಲಿ ಇಬ್ಬರು ಸುರಕ್ಷಿತವಾಗಿ ದಡ ಸೇರಿದ್ದರೆ, ಅಪ್ಪುಟಿ ಅಬ್ರಹಾಂ ಮತ್ತು ಅಂಕಿತ್ ಸಮುದ್ರದಲ್ಲಿ ಕೊಚ್ಚಿಹೋಗಿದ್ದರು.

ಘಟನೆ ಬಳಿಕ ನಾಪತ್ತೆಯಾದವರಿಗಾಗಿ ಪೊಲೀಸರು, ಕರಾವಳಿ ರಕ್ಷಣಾ ಪಡೆ ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಸುತ್ತಿದ್ದರು.

ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಚಿತ್ತಾರಿ ಸಮೀಪ ಅಪ್ಪುಟಿ ಅಬ್ರಹಾಂ ಅವರ ಮೃತದೇಹ ಸ್ಥಳೀಯರಿಗೆ ಪತ್ತೆಯಾಯಿತು. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುತ್ತುಂತಲ ಪ್ರದೇಶದ ಸಮುದ್ರ ತೀರದಲ್ಲಿ ಅಂಕಿತ್ ಅವರ ಮೃತದೇಹವೂ ಪತ್ತೆಯಾಗಿದೆ.

ಸಮುದ್ರದಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ ಮೀನುಗಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

ಘಟನೆಯಿಂದ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!