ತಡೆಗೋಡೆ ಬಿರುಕು, ಮರ ಉರುಳುವ ಆತಂಕ; ₹72 ಕೋಟಿ ಸೇತುವೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಮಂಜೇಶ್ವರ, ಜು. 2: ಕುಂಬಳೆ ಕಂಚಿಕಟ್ಟೆ ಸೇತುವೆ ಸಮೀಪದ ರಸ್ತೆ ತೀವ್ರ ಹಾನಿಗೊಳ್ಳುವ ಹಂತ ತಲುಪಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಆತಂಕದ ನಡುವೆ ಸಂಚರಿಸುವಂತಾಗಿದೆ.
ಸೇತುವೆಯಿಂದ ಸುಮಾರು 250 ಮೀಟರ್ ದೂರದಲ್ಲಿ ನಿರ್ಮಿಸಲಾಗಿದ್ದ ಕಲ್ಲಿನ ತಡೆಗೋಡೆ ಬಿರುಕು ಬಿಟ್ಟು ಕುಸಿದಿದೆ. ರಸ್ತೆಬದಿಯ ಮರದ ಬುಡದ ಮಣ್ಣು ಜರಿದಿರುವುದರಿಂದ ಮರ ಹಾಗೂ ತಡೆಗೋಡೆ ಯಾವುದೇ ಕ್ಷಣದಲ್ಲಿ ರಸ್ತೆಗೆ ಉರುಳುವ ಅಪಾಯ ಎದುರಾಗಿದೆ.

ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಭದ್ರತಾ ಸಮಸ್ಯೆ ಗಂಭೀರವಾಗಿದೆ. ಅಪಾಯದ ಹಿನ್ನೆಲೆಯಲ್ಲಿ ಈ ಹಿಂದೆ ಬಸ್ ಪರವಾನಗಿ ರದ್ದುಗೊಳಿಸಿ, ಭಾರಿ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು.
ಈ ಪ್ರದೇಶದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ₹72 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕ ಭದ್ರತಾ ಕ್ರಮಗಳ ಜೊತೆಗೆ ಶಾಶ್ವತ ಪರಿಹಾರ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


