ಚಳಿಯಂಗೋಡು ಬಳಿ ಭಾರಿ ಮಳೆಯಿಂದ ಘಟನೆ; ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರ ಪುನಃ ಆರಂಭ
ಕಾಸರಗೋಡು, ಜು. 2: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕಾಸರಗೋಡು–ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ ಚಳಿಯಂಗೋಡು ಸಮೀಪ ಗುಡ್ಡ ಕುಸಿದು ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು.
ಮಣ್ಣು ತಡೆಯಲು ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆಯ ಮೇಲ್ಭಾಗದಿಂದ ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ಏಕಾಏಕಿ ರಸ್ತೆಗೆ ಜರಿದುಬಿದ್ದವು. ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಬಂಡೆಕಲ್ಲು ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ಮತ್ತು ಬಂಡೆಕಲ್ಲುಗಳನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿತದ ಸಾಧ್ಯತೆ ಇರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


