ಮಲಯಾಳ ಭಾಷಾ ಮಸೂದೆ-2025 ಕುರಿತು ಸ್ಪಷ್ಟೀಕರಣ ಪತ್ರ: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮರುಪ್ರತ್ಯುತ್ತರ

ಕಾಸರಗೋಡು, ಜು. 7: ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆ-2025 ಕುರಿತು ಸಲ್ಲಿಸಿದ್ದ ಮನವಿಗೆ ಕೇರಳ ಸರ್ಕಾರದ ಆಡಳಿತ ಭಾಷಾ (Official Language) ಇಲಾಖೆಯ ಎಡಿಷನಲ್ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸ್ಪಷ್ಟೀಕರಣ ಪತ್ರ ಬಂದಿರುವುದಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.

ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಈ ಹಿಂದೆ ಮುಖ್ಯಮಂತ್ರಿ ಹಾಗೂ ಕೇರಳ ರಾಜ್ಯ ಭಾಷಾ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದ್ದ ಮನವಿಯಲ್ಲಿ, ಮಲಯಾಳ ಭಾಷಾ ಮಸೂದೆಯ ಕೆಲ ಅಂಶಗಳು ಕನ್ನಡ ಭಾಷಿಕರು ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಭಾಷಾ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ, ಮಸೂದೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರದ Personnel & Administrative Reforms (Official Language) Department ವತಿಯಿಂದ ಮೇ 22, 2026ರಂದು ನೀಡಿದ ಸ್ಪಷ್ಟೀಕರಣದಲ್ಲಿ, ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಕನ್ನಡ ಹಾಗೂ ತಮಿಳು ಭಾಷಿಕ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯನ್ನು ಕಲಿಯುವ ಅವಕಾಶ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಸ್ಪಷ್ಟೀಕರಣ ಪತ್ರದಲ್ಲಿ, ಮಲಯಾಳ ಭಾಷಾ ಮಸೂದೆಯ ವಿಭಾಗ 5 ಹಾಗೂ ವಿಭಾಗ 6(2)ರ ಪ್ರಕಾರ, ಮಾತೃಭಾಷೆ ಮಲಯಾಳಂ ಅಲ್ಲದ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಭಾಷೆಯನ್ನು ಆಯ್ಕೆ ಮಾಡುವ ಅವಕಾಶವಿದ್ದು, ಈ ವ್ಯವಸ್ಥೆ ರಾಷ್ಟ್ರೀಯ ಶಿಕ್ಷಣ ಮತ್ತು ಭಾಷಾ ಪಠ್ಯಕ್ರಮದ ನಿಯಮಗಳಿಗೆ ಅನುಗುಣವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳ ಭಾಷೆಯನ್ನು ಕಡ್ಡಾಯಗೊಳಿಸುವ ಅಥವಾ ಅವರ ಮಾತೃಭಾಷೆ ಕಲಿಯುವ ಹಕ್ಕನ್ನು ನಿರ್ಬಂಧಿಸುವ ಉದ್ದೇಶ ಮಸೂದೆಯಲ್ಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ, ಈ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಕಾನೂನು ತಜ್ಞರು ಹಾಗೂ ನ್ಯಾಯವಾದಿಗಳ ಸಲಹೆ ಪಡೆದು, ಜುಲೈ 6, 2026ರಂದು ಕೇರಳ ಸರ್ಕಾರದ ಆಡಳಿತ ಭಾಷಾ ಇಲಾಖೆಯ ಎಡಿಷನಲ್ ಮುಖ್ಯ ಕಾರ್ಯದರ್ಶಿಗೆ ಮರುಪ್ರತ್ಯುತ್ತರ ಸಲ್ಲಿಸಿರುವುದಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ಸಂಪೂರ್ಣ ರಕ್ಷಣೆ ಹಾಗೂ ಮಸೂದೆಯಲ್ಲಿನ ಎಲ್ಲ ಗೊಂದಲಗಳನ್ನು ನಿವಾರಿಸುವಂತೆ ಪ್ರತಿಷ್ಠಾನ ಒತ್ತಾಯಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!