ಮಂಜೇಶ್ವರ, ಜು. 7: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಸಮರ್ಪಕ ಮೇಲ್ಛಾವಣಿ (ಶೀಟ್ ಹೊದಿಕೆ) ಇಲ್ಲದ ಕಾರಣ ಮಳೆ ಸುರಿದಾಗ ಪ್ರಯಾಣಿಕರು ಶೌಚಾಲಯದೊಳಗೆ ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಪ್ಲಾಟ್‌ಫಾರ್ಮ್‌ನ ಮಧ್ಯಭಾಗದಲ್ಲಿ ಮಾತ್ರ ಭಾಗಶಃ ಮೇಲ್ಛಾವಣಿ ಅಳವಡಿಸಲಾಗಿದ್ದು, ಉಳಿದ ಭಾಗ ಸಂಪೂರ್ಣ ಬಯಲಾಗಿಯೇ ಉಳಿದಿದೆ. ಪರಿಣಾಮ ಮಳೆ ಬಂದಾಗ ಪ್ರಯಾಣಿಕರು ನೆನೆಯುವುದನ್ನು ತಪ್ಪಿಸಿಕೊಳ್ಳಲು ಶೌಚಾಲಯ ಅಥವಾ ಇತರೆ ಸಣ್ಣ ಆಶ್ರಯ ಸ್ಥಳಗಳತ್ತ ಧಾವಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.


ಪ್ರತಿನಿತ್ಯ ಸುಮಾರು 15 ರೈಲುಗಳು ನಿಲುಗಡೆಯಾಗುವ ಈ ಪ್ರಮುಖ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಮಳೆಗಾಲದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ದೂರದೂರಿನಿಂದ ಆಗಮಿಸುವ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಪ್ಲಾಟ್‌ಫಾರ್ಮ್‌ನ ಸಂಪೂರ್ಣ ಉದ್ದಕ್ಕೂ ಮೇಲ್ಛಾವಣಿ ನಿರ್ಮಿಸಿ ಪ್ರಯಾಣಿಕರಿಗೆ ಸುರಕ್ಷಿತ ಆಶ್ರಯ ಕಲ್ಪಿಸುವಂತೆ ಸ್ಥಳೀಯರು ಹಾಗೂ ಪ್ರಯಾಣಿಕರು ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.


