ಕಾಸರಗೋಡು | ಜು. 9: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 26ರಂದು ನಡೆಯಲಿರುವ ‘ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ’ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನ ಸಮಿತಿಯ ಸಮಾಲೋಚನಾ ಸಭೆ ಕನ್ನಡ ಭವನ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಯಿತು.


ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪಿ. ಸೋಮಶೇಖರ್ (ಐಎಎಸ್) ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಕರ್ನಾಟಕದ ವಿವಿಧ ಕನ್ನಡ ಪ್ರಾಧಿಕಾರಗಳು, ವಿವಿಧ ಜಿಲ್ಲೆಗಳ ಕನ್ನಡ ಭವನ ಘಟಕಗಳು, ಸುಮಾರು 50 ಸಂಘಟನೆಗಳ ಪ್ರತಿನಿಧಿಗಳು, 50ಕ್ಕೂ ಹೆಚ್ಚು ಸಾಹಿತಿಗಳು, ಕವಿಗಳು, ವಿದ್ವಾಂಸರು ಹಾಗೂ 10ಕ್ಕೂ ಅಧಿಕ ಕಲಾತಂಡಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಸಮ್ಮೇಳನದ ಅಂಗವಾಗಿ ಜುಲೈ 26ರಂದು ಬೆಳಿಗ್ಗೆ 9 ಗಂಟೆಗೆ ನುಳ್ಳಿಪ್ಪಾಡಿ ಮುನಿಸಿಪಲ್ ಬಸ್ ನಿಲ್ದಾಣದಿಂದ ಭವ್ಯ ಕನ್ನಡ ಮೆರವಣಿಗೆ ಆಯೋಜಿಸಲಾಗುವುದು. ತೆರೆದ ವಾಹನದಲ್ಲಿ ಸರ್ವಾಧ್ಯಕ್ಷರನ್ನು ಕರೆತರುವ ಮೆರವಣಿಗೆಯಲ್ಲಿ ಭಜನೆ, ಕುಣಿತ ಭಜನೆ, ಡೊಳ್ಳು ಕುಣಿತ, ತಮಟೆ, ಪಟ ಕುಣಿತ, ಮಂಡ್ಯ ಪೂಜಾ ಕುಣಿತ, ಚೆಂಡೆ ಮೇಳ ಸೇರಿದಂತೆ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾಪ್ರದರ್ಶನಗಳು ನಡೆಯಲಿವೆ.
ಬೆಳಿಗ್ಗೆ 10 ಗಂಟೆಗೆ ಕನ್ನಡ ಭವನ ಸಭಾಂಗಣದಲ್ಲಿರುವ ದಿ. ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ವಿಶೇಷ ಗೌರವ ಮೆರವಣಿಗೆಯೊಂದಿಗೆ ಸ್ವಾಗತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕರ್ನಾಟಕದಿಂದ ಆಗಮಿಸುವ ಅತಿಥಿಗಳ ವಸತಿ, ಊಟೋಪಚಾರ, ಅತಿಥಿ ಸತ್ಕಾರ, ಮೆರವಣಿಗೆ, ಪ್ರಚಾರ, ಮಾಧ್ಯಮ, ಆಹ್ವಾನ ಪತ್ರಿಕೆ ವಿತರಣೆ, ಆರ್ಥಿಕ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಲಾಯಿತು.
ಸಭೆಯಲ್ಲಿ ಪ್ರದೀಪ್ ಬೇಕಲ್, ನವೀನ್ ನಾಯ್ಕ ನಾಗರಕಟ್ಟೆ, ಲೋಕೇಶ್ ಶೆಟ್ಟಿ, ಶರತ್ ಅಣಂಗೂರು, ಜಗದೀಶ್ ಅಣಂಗೂರು, ಪ್ರಶಾಂತ್ ಎಲ್.ಐ.ಸಿ., ನಗರಸಭಾ ಸದಸ್ಯೆ ದಿವ್ಯಾ ಸಂದೀಪ್, ಕೌನ್ಸಿಲರ್ ಶ್ರುತಿ ವಿಕಾಸ್, ಜಯಂತ್ ಅಣಂಗೂರು, ಶಶಿಕಾಂತ್ ಶೆಟ್ಟಿ, ಸುಬ್ಬಣ್ಣ ರೈ, ದಿನೇಶ್ ಅಣಂಗೂರು ಸೇರಿದಂತೆ ಹಲವರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಕನ್ನಡ ಭವನ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಸಂಧ್ಯಾರಾಣಿ ಟೀಚರ್ ವಂದಿಸಿದರು. ಕಾರ್ಯಕ್ರಮವನ್ನು ಪ್ರದೀಪ್ ಬೇಕಲ್ ನಿರೂಪಿಸಿದರು.


