ಕಾಸರಗೋಡು, ಜು. 10: ಕೊಪ್ಪಳ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದ ಹಾಗೂ ಸಂಘಟನಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಶ್ರೀ ಮಲ್ಲಯ್ಯ ಶಿವಮೂರ್ತಯ್ಯ ಕೋಮಾರಿ ಅವರಿಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್‌ರಾಜ್ಯ “ಕನ್ನಡ ಪಯಸ್ವಿನಿ ರಂಗ ರತ್ನ” ಅಚೀವ್‌ಮೆಂಟ್ ಅವಾರ್ಡ್–2026 ಘೋಷಿಸಲಾಗಿದೆ.

ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗಭೂಮಿ ಹಾಗೂ ಕನ್ನಡ ಸಂಘಟನಾ ಕ್ಷೇತ್ರಕ್ಕೆ ಮಲ್ಲಯ್ಯ ಕೋಮಾರಿ ಅವರು ನೀಡಿರುವ ಅಪೂರ್ವ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


