ಕಾಸರಗೋಡು: ನೆಲ್ಲಿಕುನ್ನು ಕಸಬಾ ಕಡಲತೀರದಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ ಅನಾಮಧೇಯ ಶವದ ಸುತ್ತಲಿನ ನಿಗೂಢತೆ ಇದೀಗ ಮತ್ತಷ್ಟು ಬಿಗಿಯಾಗಿದೆ. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯಲ್ಲಿ, ಈ ಮೃತದೇಹವನ್ನು ಈ ಹಿಂದೆಯೇ ಬೇರೊಂದು ಕಡೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂಬ ಅಚ್ಚರಿಯ ಸತ್ಯವನ್ನು ಫೋರೆನ್ಸಿಕ್ ವೈದ್ಯರು ದೃಢಪಡಿಸಿದ್ದಾರೆ.

ಕೇರಳದ ಹೊರಗಡೆ, ಅಂದರೆ ಕರ್ನಾಟಕ ಅಥವಾ ಗೋವಾದ ಆಸ್ಪತ್ರೆಯೊಂದರಲ್ಲಿ ಮೊದಲ ಮರಣೋತ್ತರ ಪರೀಕ್ಷೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಅನಾಮಧೇಯ ಶವ ಶರೀರ ನಿಯಮಾನುಸಾರ ಮಣ್ಣುಮಾಡಿದ ಬಳಿಕ, ಅದು ಸಮುದ್ರದ ಪಾಲಾಗಿ ಕಾಸರಗೋಡಿನ ದಡಕ್ಕೆ ಹೇಗೆ ತೇಲಿಬಂತು ಎಂಬುದು ಪೊಲೀಸರ ತಲೆನೋವಿಗೆ ಕಾರಣವಾಗಿದೆ.

ಜುಲೈ 11ರಂದು ಪತ್ತೆಯಾದ, ಅಂದಾಜು 45 ವರ್ಷ ಪ್ರಾಯದ ಈ ಶವದ ಕುರಿತು ಕರಾವಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಕಗ್ಗಂಟಾಗಿರುವ ನಿಗೂಢ ಜಾಲವನ್ನು ಭೇದಿಸಲು ವ್ಯಾಪಕ ತನಿಖೆಗೆ ಚಾಲನೆ ನೀಡಿದ್ದಾರೆ .


