ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲೂ ಮಾರಣಾಂತಿಕ ‘ಅಮೀಬಿಕ್ ಮಸ್ತಿಷ್ಕ ಜ್ವರ’ ಪ್ರಕರಣ ವರದಿಯಾಗಿದೆ.ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 18 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನ ಸ್ಥಿತಿ ಅತ್ಯಂತ ಗಂಭೀರವಾಗಿದೆ.

ಸೋಮವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಈ ರೋಗ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಒಂದು ವಾರದ ಹಿಂದೆ ಯುವಕ ಹಾಗೂ ಆತನ ಸ್ನೇಹಿತರು ಕೊಳವೆಂದರಲ್ಲಿ ಈಜಲು ತೆರಳಿದ್ದರು.
ಈ ಹಿನ್ನೆಲೆಯಲ್ಲಿ ಕಾಞಂಗಾಡ್-ಪಾಣತ್ತೂರು ರಾಜ್ಯ ಹೆದ್ದಾರಿ ಬದಿಯಲ್ಲಿರುವ ನಿರ್ದಿಷ್ಟ ಕೊಳದಲ್ಲಿ ಸಾರ್ವಜನಿಕರು ಈಜುವುದನ್ನು ಪೊಲೀಸರು ಮತ್ತು ಆರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಕಳೆದ ಒಂದು ವಾರದೊಳಗೆ ಈ ಕೊಳದಲ್ಲಿ ನೀರಾಡಿರುವ ಅಥವಾ ಈಜಿರುವ ಪ್ರತಿಯೊಬ್ಬರೂ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಪಾಸಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದೇ ರೀತಿ
ಶಾಲಾ ವಿದ್ಯಾರ್ಥಿಗಳು, ಯುವಕರು ಹಾಗೂ ವಾಹನ ಸವಾರರು ಪ್ರಯಾಣದ ಮಧ್ಯೆ ರಸ್ತೆ ಬದಿಯ ಈ ಕೊಳಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ತಡೆಯಲು ಕಠಿಣ ಸೂಚನೆ ನೀಡಲಾಗಿದೆ.

ಮೆದುಳನ್ನು ತಿನ್ನುವ ಈ ಅಪರೂಪದ ಹಾಗೂ ಅಪಾಯಕಾರಿ ಸೋಂಕಿನ ಕುರಿತು ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

