ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ವೇಳೆ ಸಿಕ್ಕ ಎರಡು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದನ್ನು ಯಾವುದೇ ಆಶೆಗೆ ಒಳಗಾಗದೆ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪಳ್ಳಿಕ್ಕರೆ ಪಂಚಾಯತ್ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಮಾನವೀಯತೆ ಮೆರೆದಿದ್ದಾರೆ.

ಪೊಯಿನಾಚಿ ಪರಂಬ್ನ ಕೃಷ್ಣ ಎಂಬವರ ಮನೆಯ ತ್ಯಾಜ್ಯ ಸಂಗ್ರಹಿಸುತ್ತಿದ್ದ ಕಮಲ ಎನ್. ಹಾಗೂ ಮಮತ ಅವರಿಗೆ ಪ್ಲಾಸ್ಟಿಕ್ ಚೀಲದೊಳಗೆ ಕಾಗದದಲ್ಲಿ ಸುತ್ತಿಟ್ಟಿದ್ದ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

ಇತ್ತೀಚೆಗೆ ನಿಧನರಾದ ಕೃಷ್ಣ ಅವರ ಪತ್ನಿ ಜಾನಕಿ ಬಳಸುತ್ತಿದ್ದ ಚೀಲವನ್ನು ಕಸದೊಂದಿಗೆ ಸೇರಿಸಿ ನೀಡಲಾಗಿತ್ತು.
ಕೂಡಲೇ ಎಚ್ಚೆತ್ತ ಪ್ರಾಮಾಣಿಕ ಕಾರ್ಯಕರ್ತೆಯರು ಆ ಸಂಪತ್ತನ್ನು ಮಾಲೀಕರಿಗೇ ಒಪ್ಪಿಸಿದರು. ಇವರ ಈ ದೊಡ್ಡ ಮನಸ್ಸಿಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


