ಮಂಜೇಶ್ವರ: ಕೊಲ್ಲಿ ಉದ್ಯೋಗಿ ಯುವಕನನ್ನು
ಅಪಹರಣಗೈದು ಹಿಗ್ಗಾ ಮಗ್ಗಾ ಥಳಿಸಿ ಕೊಲೆಗೈದ ಬಳಿಕ ಶವವನ್ನು ಕಾರಿನಲ್ಲಿ ಕೊಂಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾತನನ್ನು ಕಾಸರಗೋಡು ಕ್ರೈಂಬ್ರಾಂಚ್ ತಂಡ ಬಂಧಿಸಿದೆ. ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಸಮಗ್ರ ವಾಗಿ ತನಿಖೆಗೊಳಪಡಿಸಿದ ಬಳಿಕ ಅಧಿಕೃತವಾಗಿ ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿ ಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
2022 ಜೂನ್ 26ರಂದು ನಡೆದ ಪ್ರಕರಣ ಇದಾಗಿದೆ . ಸೀತಾಂಗೋಳಿ ಮುಗು ರಸ್ತೆ ನಿವಾಸಿ ಅಬೂಬಕರ್ ಸಿದ್ದಿಕ್ ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿದ್ದ ಒಬ್ಬನಿಗೆ ಹಸ್ತಾಂತರಿಸಲೆಂದು ನೀಡಲಾದ 30 ಲಕ್ಷ ರೂಪಾಯಿಗೆ ಸಂಬಂಧಿಸಿದ ತರ್ಕವೇ ಕೊಲೆಕೃತ್ಯಕ್ಕೆ ಕಾರಣವಾಗಿತ್ತು.
ಮೊದಲು ಅಬೂಬಕರ್ ಸಿದ್ದಿಕ್‌ರ ಸಹೋದರ ಹಾಗೂ ಸ್ನೇಹಿತನನ್ನು ಬಾಡಿಗೆ ಗೂಂಡಾ ತಂಡ ಅಪಹರಣಗೈದು ಜನವಾಸವಿಲ್ಲದ ಸ್ಥಳದಲ್ಲಿ ಕೂಡಿ ಹಾಕಿದ ಬಳಿಕ ಹಿಗ್ಗಾ ಮುಗ್ಗಾ ಥಳಿಸಿತ್ತು.
ಈ ಹಿನ್ನೆಲೆಯಲ್ಲಿ ಗಲ್ಫ್ ನಲ್ಲಿದ್ದ ಅಬೂಬಕರ್ ಸಿದ್ದಿಕ್‌ರನ್ನು ಊರಿಗೆ ಕರೆಸಿದ ಬಳಿಕ ಆತನನ್ನು ಕಾರಿನಲ್ಲಿ ಅಪಹರಣಗೈದು ಪೈವಳಿಕೆಯ ಜನವಾಸವಿಲ್ಲದ ಎರಡಂತಸ್ಥಿನ ಮನೆಗೆ ತಲುಪಿಸಿ ಅಲ್ಲಿ ಆತನನ್ನು ತಲೆಕೆಳಗಾಗಿಸಿ ನೇತು ಹಾಕಿದ ಬಳಿಕ ಗಂಭೀರವಾಗಿ ನಡೆಸಿದ ಹಲ್ಲೆಯಿಂದ ಸಾವು ಸಂಭವಿಸಿತ್ತು.
ಬಳಿಕ ಬಾಡಿಗೆ ಗೂಂಡಾ ತಂಡ ಅಬೂಬಕ್ಕರ್ ಸಿದ್ದಿಕ್ ನ ಶವ ಶರೀರವನ್ನು ಕಾರಿನಲ್ಲಿ ಕೊಂಡೊಯ್ದು ಬಂದ್ಯೋಡಿನ ಖಾಸಗಿ ಆಸ್ಪತ್ರೆ ಮುಂದೆ ನಿಲ್ಲಿಸಿ ಪರಾರಿಯಾಗಿದ್ದರು .
ಈ ಪ್ರಕರಣದಲ್ಲಿ 19 ಮಂದಿ ಆರೋಪಿಗಳಿದ್ದಾರೆ. ಇವರಲ್ಲಿ 13 ಮಂದಿಯನ್ನು ಈ ಹಿಂದೆ ಬಂಧಿಸಲಾಗಿದೆ. ಇನ್ನು ಕೊಲೆಕೃತ್ಯದಲ್ಲಿ ನೇರವಾಗಿ ಭಾಗಿಯಾದವರ ಸಹಿತ ಐದು ಮಂದಿ ತಲೆಮರೆಸಿಕೊಂಡಿದ್ದಾರೆ. ಅಬೂಬಕರ್ ಸಿದ್ದಿಕ್‌ರ ಕೊಲೆ ಕೃತ್ಯದ ಹಿಂದೆ ಇನ್ನಷ್ಟು ಆರೋಪಿಗಳು ಇದ್ದಾರೆಂದು ತಾಯಿ ನೀಡಿದ ದೂರಿನಂತೆ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು.
ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಕೊಲೆಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರುಗಳನ್ನು ವಶಪಡಿಸಲಾಗಿತ್ತು. ಕೊಲೆ ನಡೆದ ದಿನದಂದೇ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾದ ಅಶರ್ ಅಲಿಯನ್ನು ಸೆರೆಹಿಡಿಯಲು ಕ್ರೈಂಬ್ರಾಂಚ್ ಲುಕೌಟ್ ನೋಟೀಸು ಹೊರಡಿಸಿತ್ತು. ಇತರ ಆರೋಪಿಗಳನ್ನು ಪತ್ತೆಹಚ್ಚಲಿರುವ ಕ್ರಮವನ್ನು ಕ್ರೈಂಬ್ರಾಂಚ್ ಚುರುಕುಗೊಳಿಸಿದೆ.