ಕನ್ನಡ ಶಾಲೆಗಳನ್ನು ಉಳಿಸಿದರೆ ಮಾತ್ರ ಭಾಷೆ, ಸಂಸ್ಕೃತಿ ಉಳಿಕೆ ಸಾಧ್ಯ: ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ

ಕಾಸರಗೋಡು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದು ಹಿರಿಯ ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹೇಳಿದರು.

ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ನೀಡುವ ತುತ್ತಿನೊಂದಿಗೆ ಕನ್ನಡ ಭಾಷೆ ನಮ್ಮ ಬದುಕಿನ ಭಾಗವಾಗುತ್ತದೆ. ಜೀವನದುದ್ದಕ್ಕೂ ನಮ್ಮೊಂದಿಗೆ ಇರುವ ಕನ್ನಡ ಭಾಷೆ ಸಂಸ್ಕಾರವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಹಾರ ಅರ್ಪಿಸಲಾಯಿತು. ಕನ್ನಡ ಧ್ವಜ ಹಿಡಿದು ಕನ್ನಡ ಪರ ಪ್ರತಿಜ್ಞೆ ಸ್ವೀಕರಿಸಲಾಯಿತು. ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿಯಾನದ ರೂವಾರಿ ಉನೈಸ್ ಪೆರಾಜೆ ಅವರಿಗೆ ಕನ್ನಡ ಭವನದ ವತಿಯಿಂದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕನ್ನಡ ಭವನದ ಸಂಸ್ಥಾಪಕ ಡಾ. ವಾಮನರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಶಿಹಾಬ್ ಗಾಳಿಮುಖ, ಈಶ್ವರ ನಾಯ್ಕ್ ಮಾಸ್ಟರ್, ವಸಂತ ಬಾರಡ್ಕ, ವಸಂತ ಕೆರೆಮನೆ, ಎಂ.ಕೆ.ಎಚ್. ಪೆರುವಾಡ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ವಾಮನರಾವ್ ಬೇಕಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅಖಿಲೇಶ್ ನಗುಮುಗಂ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!