ಕಾಸರಗೋಡು: ಕರಾವಳಿ ಹಾಗೂ ಮಲಬಾರ್ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಭಾರತೀಯ ರೈಲ್ವೇ, ರಾಜ್ಯದ ಪ್ರಮುಖ ರೈಲುಗಳಾದ ಮಲಬಾರ್ ಮತ್ತು ಮಾವೇಲಿ ಎಕ್ಸ್ಪ್ರೆಸ್ಗಳಿಗೆ ತಲಾ ಒಂದೊಂದು ಹೆಚ್ಚುವರಿ ಸ್ಲೀಪರ್ ಕೋಚ್ಗಳನ್ನು ಮಂಜೂರು ಮಾಡಿದೆ.

ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಸಂಚರಿಸುವ ಮಾವೇಲಿ ಎಕ್ಸ್ಪ್ರೆಸ್ (16603) ಬುಧವಾರದಿಂದ ಹಾಗೂ ಮಂಗಳೂರು ಮಾವೇಲಿ ಎಕ್ಸ್ಪ್ರೆಸ್ (16604) ಇಂದಿನಿಂದ ಹೆಚ್ಚುವರಿ ಕೋಚ್ನೊಂದಿಗೆ ಸೇವೆ ನೀಡಲಿವೆ. ಇದರಿಂದಾಗಿ ಮಾವೇಲಿ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಕೋಚ್ಗಳ ಸಂಖ್ಯೆ 10ಕ್ಕೇರಲಿದೆ.

ಅದೇ ರೀತಿ, ಮಲಬಾರ್ ಎಕ್ಸ್ಪ್ರೆಸ್ಗೂ ಒಂದು ಹೆಚ್ಚುವರಿ ಕೋಚ್ ಸೇರ್ಪಡೆಯಾಗಿದ್ದು, ಇದರ ಸ್ಲೀಪರ್ ಕೋಚ್ಗಳ ಸಂಖ್ಯೆಯೂ 10ಕ್ಕೆ ಹೆಚ್ಚಳವಾಗಿದೆ. ಇದಲ್ಲದೆ ಚೆನ್ನೈ ಎಗ್ಮೋರ್-ಮಂಗಳೂರು ಎಕ್ಸ್ಪ್ರೆಸ್ ರೈಲಿಗೂ ತಲಾ ಒಂದೊಂದು ಕೋಚ್ ಮಂಜೂರಾಗಿದ್ದು, ಒಟ್ಟು ಕೋಚ್ ಸಂಖ್ಯೆ 12ಕ್ಕೇರಿದೆ.
ರಾಜಧಾನಿ ತಿರುವನಂತಪುರಕ್ಕೆ ಪ್ರತಿನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ

