ಪ್ಯಾಂಟು ಶರ್ಟಿನಲ್ಲೂ ಕನ್ನಡದ ಸಂತನಿರಬಹುದು ಎಂಬುದಕ್ಕೆ ಡಾ. ವಾಮನ್ ರಾವ್ ಬೇಕಲ್ ಸಾಕ್ಷಿ: ಡಾ. ಜಯಪ್ಪ ಹೊನ್ನಾಳಿ

ಕಾಸರಗೋಡು: ಪ್ಯಾಂಟು ಶರ್ಟಿನಲ್ಲೂ ಒಬ್ಬ ಕನ್ನಡದ ಸಂತನಿರಬಹುದು ಎಂಬುದಕ್ಕೆ ಕನ್ನಡ ಭವನದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಅವರೇ ಸಾಕ್ಷಿ. ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಾಗಿ ನಿರಂತರವಾಗಿ ತನು-ಮನ-ಧನವನ್ನೇ ಅರ್ಪಿಸಿ ಸೇವೆ ಸಲ್ಲಿಸುತ್ತಿರುವ ಇಂತಹ ಕನ್ನಡದ ಕಟ್ಟಾಳುವಿಗೆ ಕರ್ನಾಟಕ ಸರ್ಕಾರದಿಂದ ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸದಿರುವುದು ತೀವ್ರ ಬೇಸರದ ಸಂಗತಿ ಎಂದು ಮೈಸೂರಿನ ಖ್ಯಾತ ಕವಿ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ (ಜಯಕವಿ) ಹೇಳಿದರು.

ಕಾಸರಗೋಡಿನ ಪಂಗೋಡಿನ ಶ್ರೀ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಮನ್ ರಾವ್ ಬೇಕಲ್ ಅವರ ಕನ್ನಡ ಸೇವೆ ಹಾಗೂ ಸಾಂಸ್ಕೃತಿಕ ಕಾಯಕ ಎಲ್ಲರೂ ಗುರುತಿಸಿ ಗೌರವಿಸಬೇಕಾದದ್ದು ಎಂದರು.

ಸರ್ಕಾರಿ ಕವಿಗೋಷ್ಠಿಗಳೂ ನಾಚುವಂತೆ ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಿರುವ ವಾಮನ್ ರಾವ್ ಬೇಕಲ್ ಅವರು, ನಾಡಿನ 60ಕ್ಕೂ ಅಧಿಕ ಕವಿಗಳಿಗೆ ವೇದಿಕೆ ಕಲ್ಪಿಸಿ, ಸನ್ಮಾನಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯದ ಜೊತೆಗೆ ಗಡಿನಾಡಿನಾಚೆಗೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಕವಿಮನಸ್ಸುಗಳಿಗೆ ಪ್ರೋತ್ಸಾಹ ನೀಡುವ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕವಿತೆ ಸಹೃದಯರನ್ನು ಕುಗ್ಗಿಸದೆ ಹಿಗ್ಗಿಸಬೇಕು, ಮನಸ್ಸುಗಳನ್ನು ನರಳಿಸದೆ ಅರಳಿಸಬೇಕು, ಸಮಾಜದ ಬದುಕಿಗೆ ಬೆಂಕಿಯಾಗದೆ ಬೆಳಕಾಗಬೇಕು. ಕವಿ ಭಾಷೆಯನ್ನು ನೀರಿನಂತೆ ಬಳಸದೆ ತುಪ್ಪದಂತೆ ಬಳಸಬೇಕು. ಕವಿತೆಯ ಮೂಲಕ ಸಮುದಾಯವನ್ನು ಸಂಸ್ಕಾರಗೊಳಿಸುವ ಜವಾಬ್ದಾರಿ ಕವಿಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡದ ತ್ರಿವಿಕ್ರಮನಂತಿರುವ ವಾಮನ್ ರಾವ್ ಬೇಕಲ್ ಅವರು ವೇದಿಕೆ ಸಿಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ. ಅವರು ನಿಜಕ್ಕೂ ಗಡಿನಾಡಿನ ಕನ್ನಡ ಕಣ್ವರಾಗಿದ್ದಾರೆ. ಇಂತಹ ಕನ್ನಡದ ಕಟ್ಟಾಳುಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಅಗತ್ಯ. ಸರ್ಕಾರ ಇಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ ಪ್ರಶಸ್ತಿಗೂ ಗೌರವ ಹೆಚ್ಚುತ್ತದೆ ಎಂದು ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕನ್ನಡ ಭವನದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್, ಕನ್ನಡ ಭವನದ ಪ್ರಮುಖರಾದ ಡಾ. ಜಯಾನಂದ ಪೆರಾಜೆ, ಮುರಳಿ ಪಾರೆಕಟ್ಟೆ, ರಾಜೇಶ್, ಗಂಗಾಧರಪ್ಪ ಮೈಸೂರು, ಪ್ರಭಾ ಶಾಸ್ತ್ರಿ ಮೈಸೂರು, ಡಾ. ಅಂತೋಣಿ ರಾಜ್ ಬೆಂಗಳೂರು, ಗಿರೀಶ್ ಪಿ.ಎಂ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ವನ್ನು ಬೆಂಗಳೂರಿನ ಗೊರೂರು ಪಂಕಜ, ಉಡುಪಿಯ ಪುಷ್ಪ ಪ್ರಸಾದ್, ಮಂಗಳೂರಿನ ರೇಖಾ ಸುದೇಶ್ ರಾವ್ ನಿರೂಪಣೆ ನಿರ್ವಹಿಸಿದರು. ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!