ಅಜ್ಮಾನ್: ಒಂಟೆಗಳ ಆರೋಗ್ಯ, ಸಂತಾನೋತ್ಪತ್ತಿ, ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿನ ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳ ಕುರಿತು ಚರ್ಚಿಸಲು ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಜಂಟಿಯಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತು.

ಅಕ್ಟೋಬರ್ 17ರಂದು ತುಂಬೆ ಮೆಡಿಸಿಟಿಯಲ್ಲಿ ನಡೆದ ‘ಅಡ್ವಾನ್ಸಸ್ ಇನ್ ಕ್ಯಾಮೆಲ್ ಸೈನ್ಸ್’ ಎಂಬ ಬಹುಶಿಸ್ತೀಯ ವಿಚಾರ ಸಂಕಿರಣವನ್ನು ದುಬೈ ಕ್ಯಾಮೆಲ್ ಹಾಸ್ಪಿಟಲ್ ಮತ್ತು ದುಬೈ ಕ್ಯಾಮೆಲ್ ರಿಪ್ರೊಡಕ್ಷನ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಅಜ್ಮಾನ್ ಆಡಳಿತಗಾರರ ನ್ಯಾಯಾಲಯದ ಅಧ್ಯಕ್ಷರಾದ ಘನತೆವೆತ್ತ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಉಪಸ್ಥಿತರಿದ್ದರು.

ಯುಎಇಯಲ್ಲಿ ಒಂಟೆ ಕೇವಲ ಪ್ರಾಣಿಯಲ್ಲ, ಅದು ದೇಶದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಹಿಂದಿನ ಕಾಲದಲ್ಲಿ ವ್ಯಾಪಾರ ಮಾರ್ಗಗಳಲ್ಲಿ ಸರಕು ಸಾಗಣೆಗೆ ಪ್ರಮುಖ ಸಾಧನವಾಗಿದ್ದ ಒಂಟೆ, ಇಂದು ರೇಸಿಂಗ್, ಒಂಟೆ ಹಾಲಿನ ಉತ್ಪಾದನೆ, ಪ್ರವಾಸೋದ್ಯಮ ಹಾಗೂ ಆಹಾರ ಭದ್ರತೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಹೀಗಾಗಿ ಒಂಟೆಗಳ ಆರೋಗ್ಯ ಸಂರಕ್ಷಣೆ ವೈಜ್ಞಾನಿಕ ಅಗತ್ಯದ ಜೊತೆಗೆ ಸಾಂಸ್ಕೃತಿಕ ಜವಾಬ್ದಾರಿಯೂ ಆಗಿದೆ ಎಂಬ ಸಂದೇಶ ವಿಚಾರ ಸಂಕಿರಣದಲ್ಲಿ ಪ್ರತಿಧ್ವನಿಸಿತು.

ವಿಚಾರ ಸಂಕಿರಣದಲ್ಲಿ ಪಶುವೈದ್ಯರು, ಸಂಶೋಧಕರು, ಸಂತಾನೋತ್ಪತ್ತಿ ತಜ್ಞರು, ಶಸ್ತ್ರಚಿಕಿತ್ಸಕರು ಹಾಗೂ ಪುನರ್ವಸತಿ ಕ್ಷೇತ್ರದ ಪರಿಣತರು ತಮ್ಮ ಅನುಭವ ಮತ್ತು ಸಂಶೋಧನೆಗಳನ್ನು ಹಂಚಿಕೊಂಡರು. ಕ್ಷೇತ್ರಮಟ್ಟದ ಅನುಭವಗಳು, ಪ್ರಯೋಗಾಲಯದ ಅಧ್ಯಯನಗಳು ಹಾಗೂ ಪ್ರಾಣಿಗಳ ಆರೈಕೆಯಲ್ಲಿ ಅನುಸರಿಸಲಾಗುತ್ತಿರುವ ಆಧುನಿಕ ವಿಧಾನಗಳ ಕುರಿತು ಚರ್ಚೆ ನಡೆಯಿತು. ವಿದ್ಯಾರ್ಥಿಗಳು ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಪಶುವೈದ್ಯರಿಗೂ ತಜ್ಞರಿಂದ ಜ್ಞಾನ ಪಡೆಯಲು ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಯುಎಇ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪ್ರಾಣಿಗಳ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 12 ಗಣ್ಯರನ್ನು ಸನ್ಮಾನಿಸಲಾಯಿತು. ಸರ್ಕಾರಿ ಇಲಾಖೆ, ಸಂಶೋಧನಾ ಪ್ರಯೋಗಾಲಯ, ಒಂಟೆ ಮತ್ತು ಕುದುರೆಗಳ ಆಸ್ಪತ್ರೆ, ಉದ್ಯಮ, ಕಾನೂನು ಜಾರಿ ವ್ಯವಸ್ಥೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ತುಂಬೆ ವೆಟರ್ನರಿ ಹಾಸ್ಪಿಟಲ್ನ ಪರಿಚಯವನ್ನೂ ಮಾಡಲಾಯಿತು. ಮನುಷ್ಯರ ಆರೋಗ್ಯ ಸೇವೆಯ ಜೊತೆಗೆ ಪ್ರಾಣಿಗಳ ಆರೋಗ್ಯ ಕ್ಷೇತ್ರದಲ್ಲಿಯೂ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಪರಿಣತ ಆರೈಕೆಯನ್ನು ವಿಸ್ತರಿಸುವ ತುಂಬೆ ಗ್ರೂಪ್ನ ಉದ್ದೇಶಕ್ಕೆ ಈ ಆಸ್ಪತ್ರೆ ಸಾಕ್ಷಿಯಾಗಲಿದೆ.

ವಿಚಾರ ಸಂಕಿರಣದ ಸಮಾರೋಪದಲ್ಲಿ ಪಶುವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಪ್ರಮುಖ ಘೋಷಣೆಗಳನ್ನು ಮಾಡಲಾಯಿತು. ನವೆಂಬರ್ 10 ಮತ್ತು 11ರಂದು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ನಿಟಾ-ಫಾರ್ಮ್, ಗೊಝಲ್ ಯುಎಇ ಮತ್ತು ಒಮಾನ್ ಹಾಗೂ ಝೂಇನ್ಫಾರ್ಮ್ ಸಹಯೋಗದಲ್ಲಿ ‘ಅನಿಮಲ್ಪ್ರೊಫಿ’ ಅಂತಾರಾಷ್ಟ್ರೀಯ ಪಶುವೈದ್ಯಕೀಯ ಸಮ್ಮೇಳನವನ್ನು ಆಯೋಜಿಸಲಾಗುವುದು. ಸಾಕುಪ್ರಾಣಿಗಳ ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಆಧುನಿಕ ಚಿಕಿತ್ಸಾ ವಿಧಾನಗಳು ಮತ್ತು ಬೆಳವಣಿಗೆಗಳು ಈ ಸಮ್ಮೇಳನದ ಪ್ರಮುಖ ವಿಷಯಗಳಾಗಿವೆ.
ಇದರೊಂದಿಗೆ ದುಬೈ ಇಕ್ವೈನ್ ಹಾಸ್ಪಿಟಲ್ ಸಹಯೋಗದಲ್ಲಿ ಕುದುರೆಗಳ ಆರೈಕೆಗೆ ಸಂಬಂಧಿಸಿದ ಎರಡು ಪ್ರಾಯೋಗಿಕ ಪ್ರಮಾಣಪತ್ರ ಕೋರ್ಸ್ಗಳನ್ನು ಪರಿಚಯಿಸಲಾಯಿತು. ‘ಇಕ್ವಿ-ಏಯ್ಡ್’ ಕೋರ್ಸ್ ಕುದುರೆಗಳಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡುವುದು ಮತ್ತು ಅವುಗಳ ಸ್ಥಿತಿಯನ್ನು ಸ್ಥಿರಗೊಳಿಸುವ ವಿಧಾನಗಳ ಕುರಿತು ತರಬೇತಿ ನೀಡಲಿದೆ. ‘ಹೂಫ್-ಪ್ರೊ’ ಕೋರ್ಸ್ ಕುದುರೆಗಳ ಗೊರಸುಗಳ ಆರೈಕೆ ಹಾಗೂ ಗೊರಸುಗಳಿಗೆ ಸೂಕ್ತ ಆಕಾರ ನೀಡುವ ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿರಲಿದೆ.
ಸುಮಾರು ಮೂರು ದಶಕಗಳಿಂದ ಆರೋಗ್ಯ ಕ್ಷೇತ್ರಕ್ಕೆ ಪರಿಣತ ಮಾನವ ಸಂಪನ್ಮೂಲವನ್ನು ರೂಪಿಸುತ್ತಿರುವ ತುಂಬೆ ಸಂಸ್ಥೆ, ಇದೀಗ ಪ್ರಾಣಿಗಳ ಆರೋಗ್ಯ ಕ್ಷೇತ್ರದಲ್ಲಿಯೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಪ್ರಾದೇಶಿಕ ಪರಂಪರೆಯ ಸಂಕೇತವಾಗಿರುವ ಒಂಟೆಗಳಿಂದ ಹಿಡಿದು ಜನರ ಮನೆಗಳ ಅವಿಭಾಜ್ಯ ಭಾಗವಾಗಿರುವ ಸಾಕುಪ್ರಾಣಿಗಳವರೆಗೆ ಸಮಗ್ರ ಪಶುವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಉಪಕ್ರಮಗಳು ಮಹತ್ವದ ಹೆಜ್ಜೆಯಾಗಿವೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶಾತಿಗೆ gmu.ac.ae ವೆಬ್ಸೈಟ್ ಸಂಪರ್ಕಿಸಬಹುದು.

