ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಲು ಕ್ರಿಯಾತ್ಮಕ ಚಟುವಟಿಕೆಗಳು ಅಗತ್ಯ: ಎಂ.ಜಿ.ಆರ್. ಅರಸ್

ಕಾಸರಗೋಡು, ಅ.20: ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೇವಲ ಭಾಷಣಗಳಿಂದ ಉಳಿಸಲು ಸಾಧ್ಯವಿಲ್ಲ. ಅವುಗಳ ಉಳಿವು ಮತ್ತು ಬೆಳವಣಿಗೆಗೆ ಕ್ರಿಯಾತ್ಮಕ ಚಟುವಟಿಕೆಗಳು, ನಿರಂತರ ಸಾಹಿತ್ಯಿಕ ಕಾರ್ಯಕ್ರಮಗಳು ಹಾಗೂ ಆಸಕ್ತರನ್ನು ಒಗ್ಗೂಡಿಸುವ ಪ್ರಯತ್ನಗಳು ಅಗತ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ, ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್ ಹೇಳಿದರು.

ಕಾಸರಗೋಡು ಕನ್ನಡ ಭವನ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಂಯುಕ್ತ ಆಶ್ರಯದಲ್ಲಿ ಅ.18ರಂದು ಪಾಂಗೋಡಿನ ದೇವಸ್ಥಾನದ ‘ದುರ್ಗಾಂಬಾ’ ವೇದಿಕೆಯಲ್ಲಿ ನಡೆದ ‘ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ-2026’ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷಾ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಆಸಕ್ತರನ್ನು ಸೇರಿಸಿ, ಅವರಿಗೆ ಅವಕಾಶ ಕಲ್ಪಿಸುವುದರ ಜತೆಗೆ, ಕಾವ್ಯ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದ್ದರೂ ಸೂಕ್ತ ವೇದಿಕೆ ಸಿಗದೆ ಅವಕಾಶ ವಂಚಿತರಾದವರನ್ನು ಗುರುತಿಸಿ ಮುನ್ನೆಲೆಗೆ ತರುವುದು ಮುಖ್ಯ. ಇಂತಹ ಪ್ರಯತ್ನಗಳಿಂದ ಮಾತ್ರ ಸಶಕ್ತ ಸಾಂಸ್ಕೃತಿಕ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಕಾಸರಗೋಡು ದಸರಾ ಯೋಜನೆಯಲ್ಲಿ ಉತ್ತಮ ಪ್ರವೃತ್ತಿ ಕಾಣುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಸರಗೋಡು ಕನ್ನಡ ಭವನದ ಮೂಲಕ ಡಾ. ವಾಮನ್ ರಾವ್ ಬೇಕಲ್ ಅವರು ನಿರಂತರವಾಗಿ ಇಂತಹ ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಕನ್ನಡ ಭವನ ಆಯೋಜಿಸುವ ಕಾರ್ಯಕ್ರಮಗಳಿಗೆ ವಾಮನ್ ರಾವ್ ಬೇಕಲ್ ಆಹ್ವಾನಿಸಿದಾಗ ಕಾಸರಗೋಡಿಗೆ ಬರಲು ಸಂತೋಷವಾಗುತ್ತದೆ ಎಂದು ಹೇಳಿದರು.

ಕನ್ನಡದ ಕಾರ್ಯಕ್ಕೆ ಗಡಿನಾಡಿನಲ್ಲಿ ಅಪೂರ್ವ ವೇದಿಕೆ

ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಬಿ. ಶ್ರೀನಿವಾಸ್ ಬಹದ್ದೂರ್ ಮಾತನಾಡಿ, ಸರಕಾರ ಆಯೋಜಿಸುವ ಕಾರ್ಯಕ್ರಮದ ಮಾದರಿಯಲ್ಲಿ ಅಚ್ಚುಕಟ್ಟಾಗಿ ಸುಮಾರು 60 ಅಂತಾರಾಜ್ಯ ಕವಿಗಳಿಗೆ ‘ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಾಧಕ ಪ್ರಶಸ್ತಿ’ ಹಾಗೂ 10 ಮಂದಿಗೆ ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಿ, ಕನ್ನಡ ಮೆರವಣಿಗೆಯೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಹಾಯೋಗ ಎಂದು ಬಣ್ಣಿಸಿದರು.

ರಾಷ್ಟ್ರೀಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕವಿ, ಸಾಹಿತಿ ಹಾಗೂ ವಿಮರ್ಶಕ ಡಾ. ಜಯಪ್ಪ ಹೊನ್ನಾಳಿ (ಜಯಕವಿ ಮೈಸೂರು) ಮಾತನಾಡಿ, ಕೇರಳ ರಾಜ್ಯದ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಪೂರಕವಾದ ಇಂತಹ ಅದ್ಭುತ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಗಡಿನಾಡಿನಲ್ಲಿದ್ದುಕೊಂಡು ಅಖಿಲ ಕರ್ನಾಟಕ ಮಟ್ಟದ ಸಾಹಿತಿಗಳು ಮತ್ತು ಕವಿಗಳನ್ನು ಆಹ್ವಾನಿಸಿ, ರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುತ್ತಿರುವ ಡಾ. ವಾಮನ್ ರಾವ್ ಬೇಕಲ್ ಅವರ ಕಾರ್ಯವನ್ನು ಕರ್ನಾಟಕ ಸರಕಾರ, ಇಲಾಖೆಗಳು ಹಾಗೂ ಪ್ರಾಧಿಕಾರಗಳು ಗುರುತಿಸಿ ಪುರಸ್ಕರಿಸಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ಮೆರವಣಿಗೆಯನ್ನು ಮೈಸೂರು ರಾಜವಂಶದ ಜೆ.ಪಿ. ಅರಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇರಾ ನೇಮು ಪೂಜಾರಿ, ಡಾ. ಸುರೇಶ್ ನೆಗಳಗುಳಿ, ಡಾ. ಕೊಳಚಪ್ಪೆ ಗೋವಿಂದ ಭಟ್, ಕಥಾಬಿಂದು ಪ್ರದೀಪ್ ಕುಮಾರ್, ಕವಯತ್ರಿ ಸೀತಾಲಕ್ಷ್ಮಿ ವರ್ಮ, ಗೊರೂರು ಪಂಕಜ, ರಾಜೇಶ್ ಕೋಟೆಕಣಿ, ಜಯಾನಂದ ಪೆರಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಂಧ್ಯಾ ರಾಣಿ ಟೀಚರ್ ಸ್ವಾಗತಿಸಿದರು. ಗೊರೂರು ಪಂಕಜ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!