ಜಾಗತಿಕ ಮಟ್ಟದಲ್ಲಿ ಇಂಧನ ತೈಲ ಬೆಲೆ ನಿರಂತರ ಏರಿಕೆಯಾಗುತ್ತಿರುವ ನಡುವೆಯೂ ಮುಂದಿನ ಒಂದು ತಿಂಗಳವರೆಗೆ ಬಸ್ ದರ ಹೆಚ್ಚಳ ಮಾಡದಿರಲು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.
ಮಂಗಳವಾರ ನಡೆದ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ವಾಹನಗಳ ಬಿಡಿಭಾಗಗಳು, ಪೆಟ್ರೋಲ್, ಡೀಸೆಲ್ ಹಾಗೂ ಇಂಜಿನ್ ಆಯಿಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಸಾರಿಗೆ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂದರು.
ಬಸ್ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ತಕ್ಷಣ ದರ ಹೆಚ್ಚಳ ಮಾಡದೇ, ಮುಂದಿನ ಒಂದು ತಿಂಗಳು ಪ್ರಸ್ತುತ ದರದಲ್ಲೇ ಸೇವೆ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇಂಧನ ಹಾಗೂ ವಾಹನ ನಿರ್ವಹಣಾ ವೆಚ್ಚದ ಸ್ಥಿತಿಗತಿಗಳನ್ನು ಪರಿಶೀಲಿಸಿ, ಬಳಿಕ ನಡೆಯುವ ಸಭೆಯಲ್ಲಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.