ಕನ್ನಡ ಭಾಷೆ ನಿಂತ ನೀರಾಗದೆ ಹರಿಯುವ ನದಿಯಾಗಬೇಕು: ಡಾ. ವಾಮನ್‌ರಾವ್ ಬೇಕಲ್

ಕಾಸರಗೋಡು: ಕನ್ನಡ ಸಂಘ (ನೋಂ), ಬೆಂಗಳೂರು ವಾಣಿಜ್ಯ ತೆರಿಗೆಗಳ ಇಲಾಖೆ ಹಾಗೂ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಹಯೋಗದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಕನ್ನಡ ಭವನದ ಸಭಾಂಗಣದಲ್ಲಿ ನಡೆಯಿತು.

ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ್‌ರಾವ್ ಬೇಕಲ್ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೋಕದ ಯಾವುದೇ ಭಾಗದಲ್ಲಿ ಕನ್ನಡಿಗರಿದ್ದರೂ ಅವರ ಮನಸ್ಸುಗಳನ್ನು ಕನ್ನಡದ ಮೂಲಕ ಬೆಸೆಯುವ ಕೆಲಸವಾಗಬೇಕು. ಕನ್ನಡಿಗನಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿಗಾಗಿ ನಾವೇನು ಮಾಡಬಹುದು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಇರಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯ ನಿಂತ ನೀರಾಗದೆ ಹರಿಯುವ ನದಿಯಾಗಬೇಕು. ಒಬ್ಬ ವ್ಯಕ್ತಿಯಿಂದಲೇ ಇಷ್ಟೊಂದು ಕನ್ನಡಪರ ಕಾರ್ಯಗಳನ್ನು ಮಾಡಲು ಸಾಧ್ಯವಾದರೆ, ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಟಿ.ಆರ್. ಕೃಷ್ಣಕುಮಾರ್ ಮಾತನಾಡಿ, ಕಾಸರಗೋಡು ಕೇರಳದ ಆಡಳಿತ ವ್ಯಾಪ್ತಿಯಲ್ಲಿದ್ದರೂ ಭಾವನಾತ್ಮಕವಾಗಿ ಕನ್ನಡಿಗರೊಂದಿಗೆ ಬೆಸೆದುಕೊಂಡಿದೆ. ಭಾಷೆ ಮತ್ತು ಭಾವನೆ ಒಂದೇ ಆಗಿವೆ. ಗಡಿನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಹಲವು ಸವಾಲುಗಳಿವೆ. ಇಂದಿನ ಪೀಳಿಗೆಯ ಮಕ್ಕಳು ಕನ್ನಡ ಭಾಷೆಯಿಂದ ದೂರವಾಗುತ್ತಿರುವುದು ಆತಂಕದ ಸಂಗತಿ. ಕನ್ನಡ ಭವನವು 20 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ಕನ್ನಡದ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಗಳ ಸೇವೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಕನ್ನಡ ಸಂಘದ ವತಿಯಿಂದ ಅಂತರ್‌ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂವರಿಗೆ, ಕನ್ನಡ ಭವನದಿಂದ ವಾಣಿಜ್ಯ ತೆರಿಗೆ ಇಲಾಖೆ ಕನ್ನಡ ಸಂಘದ 8 ಮಂದಿಗೆ ಗೌರವ ಸನ್ಮಾನ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಡಿನಾಡಿನ ಹತ್ತು ಮಂದಿ ಸಾಧಕರನ್ನು ಗೌರವಿಸಲಾಯಿತು. ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಸುರೇಶ್ ನೆಗಳಗುಳಿ, ಪ್ರದೀಪ್ ಬೇಕಲ್, ವಸಂತ ಕೆರೆಮನೆ, ಜಗನ್ನಾಥ ಶೆಟ್ಟಿ ಪಿ.ಕೆ., ಅಖಿಲೇಶ್ ನಗುಮುಗಮ್, ವಸಂತ ಭಾರಡ್ಕ, ಗುರುರಾಜ್ ಕಾಸರಗೋಡು, ಗಿರೀಶ್ ಪಿ.ಎಂ. ಚಿತ್ತಾರಿ ಹಾಗೂ ಮುರಳಿ ಪಾರೆಕಟ್ಟೆ ಸನ್ಮಾನ ಸ್ವೀಕರಿಸಿದರು.

ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಾದ ಪದ್ಮಾಕರ ಆರ್. ಕುಲಕರ್ಣಿ, ರಮೇಶ್ ಕುಮಾರ್, ವಿ. ಕುಮಾರ್, ಸಹಾಯಕ ಆಯುಕ್ತರಾದ ಕೆ. ದೊರೈ, ಕೆ.ಸಿ. ಮಂಜುನಾಥ್, ಕೆ.ಎನ್. ನವೀನ್, ರಾಕೇಶ್ ರಾಥೋಡ್, ಪ್ರಮುಖರಾದ ಶೋಭಾ , ಕೆ ಸಿ ಮಂಜುನಾಥ್, ಸಂಧ್ಯಾರಾಣಿ ಟೀಚರ್, ರಾಜೇಶ್, ಸತೀಶ್ ಕೂಡ್ಲು ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ವತಿಯಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು. ಗುರುರಾಜ್ ಕಾಸರಗೋಡು ಮತ್ತು ತಂಡದವರು ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಂಗೀತ, ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನೀಡಿ ಗಮನ ಸೆಳೆದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!