
ಕಾಸರಗೋಡು: ಕನ್ನಡ ಭಾಷೆ ಮತ್ತು ಸಾಹಿತ್ಯ ನಿಂತ ನೀರಾಗದೆ ನಿರಂತರ ಹರಿಯುವ ನದಿಯಾಗಬೇಕು. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಭಾಷೆಯ ಮೂಲಕ ಬೆಸೆಯುವ ಕಾರ್ಯ ನಡೆಯಬೇಕು ಎಂದು ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ್‌ರಾವ್ ಬೇಕಲ್ ಹೇಳಿದರು.

ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕನ್ನಡ ಸಂಘ (ನೋಂ), ಬೆಂಗಳೂರು ವಾಣಿಜ್ಯ ತೆರಿಗೆಗಳ ಇಲಾಖೆ ಹಾಗೂ ಕನ್ನಡ ಭವನದ ಸಹಯೋಗದಲ್ಲಿ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಟಿ.ಆರ್. ಕೃಷ್ಣಕುಮಾರ್ ಮಾತನಾಡಿ, ಕಾಸರಗೋಡು ಕೇರಳದ ಆಡಳಿತ ವ್ಯಾಪ್ತಿಯಲ್ಲಿದ್ದರೂ ಕನ್ನಡಿಗರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಹಲವು ಸವಾಲುಗಳಿದ್ದು, ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು. 20 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಕನ್ನಡ ಭವನದ ಸೇವೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಮೂವರಿಗೆ ಅಂತರ್‌ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಣಿಜ್ಯ ತೆರಿಗೆ ಇಲಾಖೆಯ ಕನ್ನಡ ಸಂಘದ ಎಂಟು ಮಂದಿಗೆ ಗೌರವ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಡಿನಾಡಿನ ಹತ್ತು ಸಾಧಕರನ್ನು ಗೌರವಿಸಲಾಯಿತು.
ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಸುರೇಶ್ ನೆಗಳಗುಳಿ, ಪ್ರದೀಪ್ ಬೇಕಲ್, ವಸಂತ ಕೆರೆಮನೆ, ಜಗನ್ನಾಥ ಶೆಟ್ಟಿ ಪಿ.ಕೆ., ಅಖಿಲೇಶ್ ನಗುಮುಖಂ, ವಸಂತ ಭಾರಡ್ಕ, ಗುರುರಾಜ್ ಕಾಸರಗೋಡು, ಗಿರೀಶ್ ಪಿ.ಎಂ. ಚಿತ್ತಾರಿ ಹಾಗೂ ಮುರಳಿ ಪಾರೆಕಟ್ಟೆ ಸನ್ಮಾನ ಸ್ವೀಕರಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಬಳಿಕ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ ಸಂಗೀತ, ನೃತ್ಯ ಮತ್ತು ಯಕ್ಷಗಾನ ಪ್ರದರ್ಶನ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

